ಹೊಸದಿಲ್ಲಿ: ಭಾರತಕ್ಕೆ ಅಂತಾರಾಷ್ಟ್ರೀಯ ವಿಮಾನವನ್ನು ಚಲಾಯಿಸುತ್ತಾ ಬಂದ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಆರೋಪಿ ಪೈಲಟ್ ಅನ್ನು ಸೇವೆಯಿಂದ ವಜಾ ಮಾಡಿದೆ.
ಕಳೆದ ವಾರ ಫುಕೆಟ್- ದೆಹಲಿ ವಿಮಾನದ ಕ್ಯಾಪ್ಟನ್ ಭಾರತಕ್ಕೆ ವಿಮಾನ ಬರುವ ವೇಳೆ ಮದ್ಯಪಾನ ಮಾಡಿರುವುದು ಪತ್ತೆಯಾಗಿತ್ತು. ವಿಮಾನ ಇಳಿದ ತಕ್ಷಣ ಬ್ರೆಥಲೈಸರ್ ಪರೀಕ್ಷೆ ನಡೆಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿತ್ತು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಟಾಟಾ ಸಮೂಹದ ಏರ್ಲೈನ್ಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಈ ಪೈಲಟ್ ಹೊಸ ಕ್ಯಾಪ್ಟನ್ ಆಗಿ ವಿಮಾನ ಚಾಲನೆ ಮಾಡುವ ತರಬೇತಿಯಲ್ಲಿದ್ದರು. ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿ ದೇಶೀಯ ವಿಮಾನದ ಕಾರ್ಯಾಚರಣೇ ವೇಳೆ ಬ್ರೆಥಲೈಸರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಂತರಾಷ್ಟ್ರೀಯ ವಿಮಾನಗಳಿಗೆ ವಿಮಾನ ಇಳಿದ ಬಳಿಕ ಈ ಪರೀಕ್ಷೆ ನಡೆಸಲಾಗುತ್ತದೆ. ೨೦೨೩ರ ಮೊದಲ ಆರು ತಿಂಗಳಲ್ಲಿ ೩೩ ಪೈಲಟ್ಗಳು ಮತ್ತು ೯೭ ಮಂದಿ ಕ್ಯಾಬಿನ್ ಸಿಬ್ಬಂದಿ ಕಾರ್ಯಾಚರಣೆ ವೇಳೆ ಮದ್ಯಪಾನ ಮಾಡಿದ್ದು ದೃಢಪಟ್ಟಿತ್ತು.