ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರವನ್ನ ಪಡೆಯುವಲ್ಲಿ ದಳಪತಿಗಳು ಯಶಸ್ವಿಯಾಗಿದ್ದಾರೆ. ರಾಜಕಾರಣದಲ್ಲಿ ಶತ್ರುತ್ವ ಎನ್ನುವುದು ಶಾಶ್ವತವಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸುಮಲತಾ ಅವರು ನನಗೆ ಶತ್ರುವಲ್ಲ. ಅವರನ್ನು ಭೇಟಿಯಾಗುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸುಮಲತಾ ಅವರ ಜೊತೆ ಖಂಡಿತವಾಗಿಯೂ ಅವರು ನನಗೆ ಶತ್ರು ಅಲ್ಲ. ಅಂಬರೀಶ್ ಬದುಕಿದ್ದಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ನಮಗೆ ಊಟ ಬಡಿಸಿದ್ದಾರೆ. ಹೀಗಿರುವಾಗ ಆಗಿ ಹೋಗಿದ್ದನ್ನೇ ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ರಾಜಕೀಯ ಸನ್ನಿವೇಶ, ಆಯಾ ಸಂದರ್ಭದಲ್ಲಿ ಸಂಘರ್ಷ ಆಗಿದೆ. ಆ ರಾಮಾಂಜನೇಯರ ನಡುವೆಯೇ ಯುದ್ಧ ಆಗಿದೆಯಲ್ಲವೇ? ಅವರ ಮುಂದೆ ನಾವೆಷ್ಟು? ನಾವು ಹುಲು ಮಾನವರು. ಸಮಯ ಬಂದಾಗ ನಾನು ಸುಮಲತಾ ಅವರ ಜೊತೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಪಕ್ಷದಲ್ಲಿ ಶಿಸ್ತಿನಿಂದ ಇರುವವರ ಹೆಸರನ್ನು ಘೋಷಣೆ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲ. ಆ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಗಮನ ಇಟ್ಟಿದ್ದೇವೆ ಅಷ್ಟೇ ಎಂದು ಕುಮಾರಸ್ವಾಮಿ ಅವರು ಹೇಳಿದರು. ಕಾಂಗ್ರೆಸ್ ನಾಯಕರ ಒಳಜಗಳದಿಂದ ಎನ್ ಡಿಎ ಮೈತ್ರಿಕೂಟಕ್ಕೆ ಲಾಭವಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ನಮಗೆ ಗೆಲುವು ನಿಶ್ಚಿತ. ಅಭ್ಯರ್ಥಿಗಳ ಪಟ್ಟಿ ಸಿದ್ಧವಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.