ಮೈಸೂರು:ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ತನ್ನ 68 ನೇ ರೈಲ್ವೆ ಸಪ್ತಾಹದ ಪ್ರಶಸ್ತಿ ಪ್ರದಾನ ಸಮಾರಂಭವನ್ನು 29 ಮಾರ್ಚ್ 2024 ರಂದು ಮೈಸೂರಿನ ಯಾದವಗಿರಿಯ ‘ಚಾಮುಂಡಿ ಆಫೀಸರ್ಸ್ ಕ್ಲಬ್’ನಲ್ಲಿ ಆಚರಿಸಿತು. ಕಾರ್ಯಕ್ರಮಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ತಮ್ಮ ಘನ ಉಪಸ್ಥಿತಿಯೊಂದಿಗೆ ಮೆರುಗು ತಂದಿದ್ದೂ, 2022-2023 ರ ಆರ್ಥಿಕ ವರ್ಷದಲ್ಲಿನ ಅಸಾಧಾರಣ ಕಾರ್ಯಕ್ಷಮತೆ ತೋರಿದ ಅತ್ಯುತ್ತಮ ಉದ್ಯೋಗಿಗಳಿಗೆ ಪ್ರಶಸ್ತಿಗಳನ್ನು ನೀಡಿದರು.
ಮತ್ತು ರೈಲ್ವೆಗೆ ಅನುಕರಣೀಯ ಕೊಡುಗೆಗಳನ್ನು ನೀಡಿದ ಒಟ್ಟು 22 ಪರಿಶ್ರಮಿ ಸಿಬ್ಬಂದಿಗಳಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು 2023-24ನೇ ಸಾಲಿನ ವಿಭಾಗದ ಸಾಧನೆಗಳ ಬಗ್ಗೆ ಒತ್ತಿ ತಿಳಿಸಿದರು. ಗಮನಾರ್ಹವಾಗಿ, ಮೈಸೂರು ವಿಭಾಗವು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಅಂತರ-ವಿಭಾಗ ರಾಜಭಾಷಾ ಮತ್ತು ಉಳಿಕೆ ವಸ್ತುಗಳ ನಿರ್ವಹಣೆಯಲ್ಲಿನ ಕಾರ್ಯಕ್ಷಮತೆಯಂತಹ ಹಲವಾರು ವಿಭಾಗಗಳಲ್ಲಿ ದಕ್ಷತೆಯ ಫಲಕ ಪಡೆದಿದೆ. ಇದೇ ವರ್ಷ ಜನವರಿಯಲ್ಲಿ ಹುಬ್ಬಳ್ಳಿಯ ಪ್ರಧಾನ ಕಛೇರಿಯಲ್ಲಿ ನಡೆದ ‘ವಿಶಿಷ್ಟ ರೈಲು ಸೇವಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪ್ರಮುಖ ನಿಲ್ದಾಣಗಳ ವಿಭಾದದಲ್ಲಿ ಮೈಸೂರು ರೈಲು ನಿಲ್ದಾಣವು ಅತ್ಯುತ್ತಮ ನಿರ್ವಹಣೆಯ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ, ಹಾಗೆಯೇ ಬಾಗೇಶಪುರ ರೈಲು ನಿಲ್ದಾಣವು ಪೂರ್ತಿ ನೈಋತ್ಯ ರೈಲ್ವೆಯಲ್ಲಿಯೇ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಮೈನರ್ (ಸಣ್ಣ) ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಇದಲ್ಲದೆ, 23 ಜನವರಿ 2024 ರಂದು ನಡೆದ ವಿಶಿಷ್ಟ ರೈಲು ಸೇವಾ ಪುರಸ್ಕಾರ ಸಮಾರಂಭದಲ್ಲಿ ಮೈಸೂರು ವಿಭಾಗದ ಏಳು ಉದ್ಯೋಗಿಗಳನ್ನು ವಲಯ ಮಟ್ಟದಲ್ಲಿ ಅವರ ಪ್ರತಿಭಾನ್ವಿತ ಸೇವೆಗಾಗಿ ಶ್ಲಾಘಿಸಿ ಪ್ರಶಸ್ತಿ ನೀಡಲಾಯಿತು.
2023-24 ರ ಆರ್ಥಿಕ ವರ್ಷದಲ್ಲಿ ಫೆಬ್ರವರಿ 2024 ರವರೆಗಿನ ಪ್ರಮುಖ ಕಾರ್ಯಕ್ಷಮತೆಯ ಮುಖ್ಯಾಂಶಗಳು:
- 10.503 ಮಿಲಿಯನ್ ಟನ್‌ಗಳ ಒಟ್ಟಾರೆ ಸಾಗಾಣೆಯೊಂದಿಗೆ ಅತ್ಯಧಿಕ ಸರಕ್ಕಿನ ಸಾಗಣೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ 9.083% ರಷ್ಟು ಗಣನೀಯ ಹೆಚ್ಚಳವಾಗಿದ್ದು ಗಮನಾರ್ಹ. (ಇದು ಹಿಂದಿನ 2022-23ರ ಪೂರ್ಣ ಹಣಕಾಸು ವರ್ಷದ ಗರಿಷ್ಠ ಸಾಗಾಣೆಯಾದ 9.549 MT ಅನ್ನು ಮೀರಿಸಿದೆ)
- ಸರಕು ಸಾಗಣೆ ಆದಾಯ ರೂ. 907.91 Cr ಆಗಿದ್ದೂ, ಹಿಂದಿನ ವರ್ಷದ ಅತ್ಯಧಿಕ ಗಳಿಕೆಯ ದಾಖಲೆ ಮುರಿದು ಮೀರಿಸಿದೆ. ಮತ್ತು ಹಿಂದಿನ ಪೂರ್ಣ ಆರ್ಥಿಕ ವರ್ಷದ ಅತ್ಯಧಿಕ ಗಳಿಕೆಯ ರೂ. 897.28 Cr ಅನ್ನು ಒಂದು ತಿಂಗಳ ಮುಂಚಿತವಾಗಿ ಮೀರಿಸಿದೆ. ಒಟ್ಟಾರೆ ಆದಾಯ ಕೂಡ ಅತ್ಯಧಿಕ ರೂ.1330.17 ಕೋಟಿಗಳಾಗಿದ್ದೂ, ಹಿಂದಿನ 2022-23ರ ಪೂರ್ಣ ಹಣಕಾಸು ವರ್ಷದ ಗರಿಷ್ಠವಾದ ರೂ. 1304.91 ಕೋಟಿ ರೂ.ಗಳನ್ನು ಕೇವಲ 334 ದಿನಗಳಲ್ಲಿ ಮೀರಿಸಿದೆ.
- ಫೆಬ್ರವರಿ 2024 ರವರೆಗೆ 30.47 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದೂ, ಹಿಂದಿನ ವರ್ಷಕ್ಕಿಂತ 5.10% ಹೆಚ್ಚಳವನ್ನು ಸಾಧಿಸಿದೆ.
- ಫೆಬ್ರವರಿ ಮಾಸದವರೆಗೆ ವಿಭಾಗದಾದ್ಯಂತ ಉದ್ದೇಶಿತ 395 RKM (ಮಾರ್ಗ ಕಿಲೋಮೀಟರ್) ಗಳಲ್ಲಿ 342.8 RKM ಗಳಷ್ಟು ವಿದ್ಯುದೀಕರಣವಾಗಿದೆ.
ವಿಭಾಗವು ಮಾನವ ಸಂಪನ್ಮೂಲದಲ್ಲಿಯೂ ಗಮನಾರ್ಹ ಪ್ರಗತಿಯನ್ನು ಕಂಡಿದ್ದೂ, ಹಲವಾರು ಹೊಸ ನೇಮಕಾತಿಗಳನ್ನು, ಬಡ್ತಿಗಳನ್ನು ಮತ್ತು ಪಿಂಚಿಣಿ ಪ್ರಧಾನ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಮುಂದುವರೆದು ಮಾತನಾಡಿದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಸಂಘಟಿತ ಕಾರ್ಮಿಕರೊಂದಿಗೆ ಸೌಹಾರ್ದಯುತ ವ್ಯವಹಾರಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವ ವಿಭಾಗದ ಬದ್ಧತೆಯ ಬಗ್ಗೆ ತಿಳಿಸಿ ಹೇಳಿದರು ಮತ್ತು ಸರಕು ಹಾಗು ಪ್ರಯಾಣಿಕರ ಸಾಗಾಣೆ ಸೇವೆಗಳ ಸುಗಮ ಕಾರ್ಯಾಚರಣೆಗಳ ಬಗ್ಗೆ ಖಚಿತಪಡಿಸಿದರು. ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯು ರೈಲ್ವೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಅನುಕೂಲಕ್ಕಾಗಿ ಸಾಮಾಜಿಕ ಕಲ್ಯಾಣ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿನ ತನ್ನ ಪ್ರಯತ್ನಗಳಿಗಾಗಿ ಗುತುತಿಸಿಕೊಂಡಿದೆ ಎಂದು ಹೇಳಿದರು.
ಕೊನೆಯಲ್ಲಿ, ಶ್ರೀಮತಿ. ಶಿಲ್ಪಿ ಅಗರ್ವಾಲ್ ರವರು ಎಲ್ಲಾ ಉದ್ಯೋಗಿಗಳಿಗೆ ಉತ್ಕೃಷ್ಟತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು ಮತ್ತು ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆಯ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಶ್ರೀ ವಿನಾಯಕ್ ನಾಯಕ್ ಮತ್ತು ಶ್ರೀಮತಿ ಇ.ವಿಜಯ ಉಪಸ್ಥಿತರಿದ್ದರು. ಶ್ರೀ. ವಿಷ್ಣು ಗೌಡ – ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಮತ್ತು ಮೈಸೂರು ವಿಭಾಗದ ಇತರ ವಿಭಾಗಗಳ ಗೌರವಾನ್ವಿತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.