ಬೆಂಗಳೂರು: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಜೂನಿಯರ್ ಎಂಜಿನಿಯರ್‌ಗಳ ಆಯ್ಕೆ ಪಟ್ಟಿ ಒಳಗೊಂಡ ಗೌಪ್ಯ ಕಡತ ನಾಪತ್ತೆಯಾಗಿದ್ದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಕಳೆದ ಜನವರಿ ೨೨ ರಂದು ಬೆಂಗಳೂರಿನ ಉದ್ಯೋಗ ಸೌಧದಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯವರ ಕಚೇರಿ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಜೂನಿಯರ್ ಎಂಜಿನಿಯರ್ ನೇಮಕಾತಿಯ ಆಯ್ಕೆ ಪಟ್ಟಿಯನ್ನು ಸ್ವೀಕರಿಸಿತ್ತು.
ಇದೀಗ ಕಡತ ನಾಪತ್ತೆಯಾಗಿದ್ದು, ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಕರ್ನಾಟಕ ಹೈಕೋರ್ಟ್ ನಿರ್ದೇಶನ ಪ್ರಕಾರ ಕಡತವನ್ನು ಸಿದ್ಧಪಡಿಸಲಾಗಿತ್ತು. ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಂಗೀಕರಿಸಿದ ಹೈಕೋರ್ಟ್, ಕಿರಿಯ ಎಂಜಿನಿಯರ್ ಹುದ್ದೆಗೆ ಅರ್ಜಿದಾರರ ಪ್ರಕರಣವನ್ನು ಪರಿಗಣಿಸುವಂತೆ ಕೆಪಿಎಸ್‌ಸಿಗೆ ಸೂಚಿಸಿತ್ತು. ಅದರಂತೆ ಆಯ್ಕೆ ಪಟ್ಟಿ ಸಿದ್ಧಪಡಿಸಲು ಕ್ರಮಕೈಗೊಳ್ಳಲಾಗಿತ್ತು.
ಇದೀಗ ವಿಧಾನ ಸೌಧ ಪೊಲೀಸರಿಗೆ ನೀಡಿರುವ ಎಫ್‌ಐಆರ್ ನಲ್ಲಿ, ಕೆಪಿಎಸ್‌ಸಿ ಕಚೇರಿಯ ಗೌಪ್ಯ ವಿಭಾಗ-೩ರಲ್ಲಿ ಕಡತವನ್ನು ಸಿದ್ಧಪಡಿಸಿ ಜನವರಿ ೨೨ ರಂದು ಸಲ್ಲಿಸಲಾಗಿತ್ತು ಎಂದು ದೂರು ನೀಡಲಾಗಿದೆ. ಅಕಸ್ಮಾತ್ ಕಡತ ಕೈಸೇರಿದೆಯೇ ಎಂದು ಪರಿಶೀಲಿಸುವಂತೆ ಕೆಪಿಎಸ್‌ಸಿ ಫೆ.೨೦ರಂದು ತನ್ನ ಎಲ್ಲ ವಿಭಾಗಗಳಿಗೆ ಮೆಮೊ ನೀಡಿತ್ತು. ಕಡತ ಸಿಕ್ಕಿದಲ್ಲಿ ಅದನ್ನು ಕೆಪಿಎಸ್ ಸಿಯ ನೇಮಕಾತಿ ವಿಭಾಗ – ೨ ಗೆ ಹಿಂತಿರುಗಿಸಲು ಮೆಮೊದಲ್ಲಿ ಸೂಚಿಸಲಾಗಿತ್ತು. ಕಡತ ಪತ್ತೆಯಾಗದಿದ್ದಾಗ ಕೆಪಿಎಸ್‌ಸಿ ಫೆ.೨೬ರಂದು ಮೆಮೊ ಹೊರಡಿಸಿ, ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪತ್ತೆ ಹಚ್ಚಿ ವರದಿ ಸಲ್ಲಿಸಲು ಅಧಿಕಾರಿಗಳು/ಸಿಬ್ಬಂದಿಗಳ ತಂಡವನ್ನು ರಚಿಸಿತ್ತು. ಆದರೆ, ಕಡತ ಇನ್ನೂ ಪತ್ತೆಯಾಗಿಲ್ಲ ಎಂದು ತಂಡ ಕೆಪಿಎಸ್ ಸಿಗೆ ಮಾಹಿತಿ ನೀಡಿದೆ. ನಂತರ ಕಡತ ನಾಪತ್ತೆಯಾಗಿರುವ ಬಗ್ಗೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಈ ಮಧ್ಯೆ, ಕಳೆದ ಮಾರ್ಚ್ ೧೩ ರಂದು ನಡೆದ ಕೆಪಿಎಸ್‌ಸಿಯ ೩೬ ನೇ ಸಭೆಯಲ್ಲಿ, ಅದರ ವ್ಯಾಪ್ತಿಯಲ್ಲಿ ಬರುವ ವಿಧಾನ ಸೌಧ ಠಾಣೆ ಪೊಲೀಸರಿಗೆ ದೂರು ನೀಡಿ ವರದಿಯನ್ನು ಅದರ ಮುಂದೆ ಇಡಲು ನಿರ್ಧರಿಸಲಾಯಿತು.