ಮಂಡ್ಯ: ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಈ ಬಗ್ಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದರು. ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಬಂದರೆ ಸಾಕು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೃದಯ ಸಮಸ್ಯೆ ಇದೆ ಅಂತ ಆಸ್ಪತ್ರೆಗೆ ದಾಖಲಾಗುತ್ತಾರೆ. ಮೂರೇ ದಿನದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆಗುತ್ತದೆ. ನಾಲ್ಕನೇ ದಿನಕ್ಕೆ ರಾಜ್ಯ ಸುತ್ತುತ್ತಾರೆ ಎಂದು ಹೇಳಿದರು.
ಸಚಿವ ಚಲುವರಾಯಸ್ವಾಮಿ ಅವರಿಗೆ ಇರುವ ಕಾಯಿಲೆ ಹೆಚ್.ಡಿ. ಕುಮಾರಸ್ವಾಮಿಯವರಿಗೂ ಇದೆ. ಚಲುವರಾಯಸ್ವಾಮಿ ಆಸ್ಪತ್ರೆಗೆ ದಾಖಲಾದರೆ ಒಂದು ತಿಂಗಳು ಆಚೆ ಬರಲ್ಲ. ಆದರೆ, ಹೆಚ್.ಡಿ. ಕುಮಾರಸ್ವಾಮಿ ಹೇಗೆ ಶಸ್ತ್ರಚಿಕಿತ್ಸೆಯಾದ ಎರಡೇ ದಿನಕ್ಕೆ ಆಚೆ ಬರುತ್ತಾರೆ. ಇದು ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಜನರ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೇ ಕೇಳಬೇಡಿ. ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿ. ಕಾಂಗ್ರೆಸ್ ಅಭ್ಯರ್ಥಿಗೆ ಅತಿಹೆಚ್ಚು ಮತ ನೀಡಿ ಗೆಲ್ಲಿಸಿ ಎಂದು ಅವರು ಕರೆ ನೀಡಿದರು.