ಸಾಲಿಗ್ರಾಮ: ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಕಳೆದ ಬಾರಿಯ ಅಧಿಕಾರದ ಅವಧಿಯು ಮುಕ್ತಾಯವಾಗುತ್ತಾ ಬಂದಿದ್ದು ತಾಲೂಕಿನ ೧೯ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಹೊಸದಾಗಿ ಮೀಸಲಾತಿ ಪ್ರಕಟಿಸಲು ಎಲ್ಲಾ ತಯಾರಿ ನಡೆದಿದ್ದು ಶುಕ್ರವಾರ ಸಾಲಿಗ್ರಾಮ ಪಟ್ಟಣದ ಶ್ರೀ ಪದ್ಮಾಂಬ ಚಿತ್ರಮಂದಿರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಮೀಸಲಾತಿಯ ಬಗ್ಗೆ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ರಾಜಕೀಯ ಪಕ್ಷಗಳಲ್ಲಿ ಕುತೂಹಲ ಮೂಡಿದೆ. ಇದೆಲ್ಲದರ ನಡುವೆ ತಾಲೂಕಿನ ವಿವಿಧ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆಯತೊಡಗಿವೆ. ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ರಣತಂತ್ರವನ್ನು ಹೆಣೆಯುತ್ತಿವೆ. ಮೀಸಲಾತಿ ಪ್ರಕಟವಾದ ನಂತರ ಎಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧಿಕಾರವನ್ನು ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.