ಮಂಗಳೂರು(ದಕ್ಷಿಣ ಕನ್ನಡ): ಈ ಸಲದ ಲೋಕಸಭಾ ಚುನಾವಣೆಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಸಮಾಜಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಎಸ್ ಎನ್‌ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟೀಂ ಸತ್ಯಜಿತ್ ಸುರತ್ಕಲ್‌ನಲ್ಲಿ ವಿವಿಧ ಸಮಾಜದ ಬಾಂಧವರು ಇರುವುದರಿಂದ ಅದು ಹಾಗೇ ಮುಂದುವರಿಯಲಿದ್ದು, ಚುನಾವಣೆಯ ನನ್ನ ಕಾರ್ಯಕ್ಕೂ ಆ ತಂಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನನ್ನ ಯಾವುದೇ ಕಾರ್ಯಕ್ಕೂ ಬೆಂಬಲ ನೀಡವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಆ ತಂಡ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದೆ ಎಂದು ಹೇಳಿದರು.
ಕಳೆದ ಶುಕ್ರವಾರ ಎಸ್‌ಎನ್‌ಜಿವಿಯ ಸಭೆ ನಡೆದು ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯದಲ್ಲಿ ನಾರಾಯಣಗುರು ಸಮಾಜ ಎಂದು ಹೇಳುವ ಬಿಲ್ಲವ, ಈಡಿಗ, ನಾಮಧಾರಿ ಎಂಬ 26 ಪಂಗಡಗಳ ಸಮಾಜ ಅನೇಕ ವರ್ಷಗಳ ನಂತರ ಸಮಾಜಕ್ಕೆ ಮೂರು ಕ್ಷೇತ್ರಗಳಲ್ಲಿ ಅವಕಾಶ ದೊರಕಿದೆ. ದ.ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ನಮ್ಮ ಸಮಾಜ ಬಹುಸಂಖ್ಯಾತ ಸಮಾಜವಾಗಿದೆ. ಆದರೆ ಬಿಜೆಪಿಯಿಂದ 33 ವರ್ಷಗಳಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿಯೂ ಸಮಾಜದ ಅಭ್ಯರ್ಥಿಗೆ ಅವಕಾಶ ನೀಡಲಾಗಿಲ್ಲ. ಕಾಂಗ್ರೆಸ್‌ನಲ್ಲಿ ನಾಲ್ಕನೆ ಬಾರಿ ಜನಾರ್ದನ ಪೂಜಾರಿ ಸೋತ ಬಳಿಕ ಕಳೆದ ಬಾರಿ ದ.ಕ.ದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು. ಎಸ್‌ಎನ್‌ಜಿವಿ ಸಂಘಟನೆ ಆರಂಭವಾದ ಶಿವಮೊಗ್ಗದ ಸಿಗಂದೂರಿನಲ್ಲಿ ಆರಂಭಗೊಂಡ ಹೋರಾಟ ಬ್ರಹ್ಮಶ್ರೀ ನಾರಾಯಣಗುರುಗಳ ಟ್ಯಾಬ್ಲೋ ವಿಚಾರ, ಪಠ್ಯಪುಸ್ತಕ, ಅಭಿವೃದ್ಧಿ ನಿಗಮ, ಕಾಂತರಾಜು ವರದಿ ಹೋರಾಟ, ವಿಮಾನ ನಿಲ್ದಾಣಕ್ಕೆ ಕೋಟಿಚನ್ನಯ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪರ ಹೆಸರಿಡುವ ಹೋರಾಟ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಇದರ ಪರಿಣಾಮವಾಗಿ ಸಮಾಜಕ್ಕೆ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು, ಕಾಂಗ್ರೆಸ್‌ನಿಂದ ಶಿವಮೊಗ್ಗ ಹಾಗೂ ದ.ಕ.ದಲ್ಲಿ ಅವಕಾಶ ನೀಡಲಾಗಿದೆ. ಸಮಾಜದ ಸಂಘಟನೆಯಾಗಿ, ಸಮಾಜವನ್ನು ಗೆಲ್ಲಿಸಲು, ಪಕ್ಷವನ್ನು ಪಕ್ಕಕ್ಕಿಟ್ಟು ಸಮಾಜದ ಅಭ್ಯರ್ಥಿಗಳಾದ ಪದ್ಮರಾಜ್ ಆರ್., ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನ ನಾರಾಯಣ ಗುರು ವಿಚಾರವೇದಿಕೆಯಿಂದ ಆಗಲಿದೆ. ಇವರು ಮೂವರು ಗೆದ್ದರೆ ಸಮಾಜಕ್ಕೆ ದೊಡ್ಡ ಶಕ್ತಿ ಸಿಗಲಿದೆ. ಉಳಿದ ಸಮಾಜಗಳಂತೆ ನಮ್ಮ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಸಾಧ್ಯ ಆಗಲಿದೆ. ಆ ನಿಟ್ಟಿನಲ್ಲಿ ಮೂರು ಕ್ಷೇತ್ರಗಳಲ್ಲಿಯೂ ತಾನೂ ಪ್ರಚಾರ ಕಾರ್ಯ ನಡೆಸುವುದಾಗಿ ಘೋಷಿಸಿದ್ದಾರೆ.