ನವದೆಹಲಿ: ಕೇಂದ್ರ ಚುನಾವಣಾ ಆಯೋಗದಲ್ಲಿ ಸರ್ಕಾರವು ತನ್ನದೇ ಆದ ಜನರನ್ನು ಹೊಂದಿದೆ ಮತ್ತು ಇವಿಎಂ ಇಲ್ಲದೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು ನೀಡಿದೆ. ಬಿಜೆಪಿ ಹಿರಿಯ ನಾಯಕ ಹರ್ದೀಪ್ ಸಿಂಗ್ ಪುರಿ ನೇತೃತ್ವದ ನಿಯೋಗ ದೇಶ ವಿರೋಧಿ ಹೇಳಿಕೆ ಎಂದು ವ್ಯಾಖ್ಯಾನಿಸಿ ದೂರು ನೀಡಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಬಂಧನ ಖಂಡಿಸಿ ಭಾನುವಾರ ಇಂಡಿಯಾ ಒಕ್ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಐಪಿಎಲ್ ನಡೆಯುವಂತೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ಆಟಗಾರರನ್ನು ಬಂಧಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.