ಬೆಂಗಳೂರು: ಹದಿನೈದು ವರ್ಷಗಳ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯುತ್ ಬಳಕೆಯ ದರವನ್ನು ಕಡಿತ ಮಾಡಲಾಗಿದ್ದು, ಏಪ್ರಿಲ್ ೧ ರಿಂದಲೇ ಜಾರಿಗೆ ಬರಲಿದ್ದು, ಮೇ ತಿಂಗಳಿನಲ್ಲಿ ನೀಡಲಾಗುವ ಬಿಲ್‌ಗಳಿಗೆ ಅನ್ವಯವಾಗಲಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ವಾರ್ಷಿಕ ಪ್ರಕ್ರಿಯೆಗಳನ್ನು ನಡೆಸಿ ಎಸ್ಕಾಂಗಳ ಪ್ರತಿಪಾದನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಫೆ.೨೨ರಂದು ಹೊರಡಿಸಿರುವ ಆದೇಶದ ಪ್ರಕಾರ ಹಿಂದಿನಿಂದ ಗೃಹ ಬಳಕೆಯ ವಿದ್ಯುತ್ ಮೇಲೆ ೧ ರೂ. ೧೦ ಪೈಸೆ ಕಡಿತವಾಗಲಿದೆ.
ಈ ಮೊದಲು ೧ರಿಂದ ೧೦೦ ರೂ. ಒಳಗಿನ ವಿದ್ಯುತ್ ದರಕ್ಕೆ ೪ ರೂ.ಗಿಂತಲೂ ಹೆಚ್ಚಿನ ದರ ಇತ್ತು. ೧೦೦ ರೂ. ಮೇಲ್ಪಟ್ಟ ವಿದ್ಯುತ್ ಬಳಕೆಗೆ ಶೂನ್ಯ ಯೂನಿಟ್‌ನಿಂದಲೇ ೭ ರೂ. ಅನ್ವಯವಾಗುತ್ತಿತ್ತು. ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಇದ್ದುದ್ದರಿಂದ ೨೦೦ ಯೂನಿಟ್ ಒಳಗಿನ ವಿದ್ಯುತ್ ಬಳಕೆಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಾಗಿರಲಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಯಿಂದ ಹೊರಗುಳಿದ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಗುಲಿತ್ತು.
ನವೀಕರಿಸಬಹುದಾದ ಇಂಧನ ಮೂಲಗಳಿಂದ ಖರೀದಿಸುವ ವಿದ್ಯುತ್‌ನ ಪ್ರತಿ ಯೂನಿಟ್‌ಗೆ ೫೦ ಪೈಸೆ ಹೆಚ್ಚಿನ ದರವನ್ನು ಮುಂದುವರೆಸಲಾಗಿದೆ ಎಂದು ಕೆಇಆರ್‌ಸಿ ತಿಳಿಸಿದೆ. ಏ.೧ರಿಂದ ಪ್ರೀಪೇಮೆಂಟ್ ಮೀಟರ್ ಅನ್ನು ಅನುಮೋದಿಸಲು ಅಗತ್ಯವಾದ ವ್ಯವಸ್ಥೆಯನ್ನು ಸೂಚಿಸಬೇಕು. ಜೂ.೧ರಿಂದ ಎಲ್‌ಟಿ ಗ್ರಾಹಕರಿಗೆ ಸ್ವಯಂ ಮಾಪಕ ಓದುವಿಕೆಯನ್ನು ಸಾಧ್ಯವಾಗಿಸಲು ಅಗತ್ಯ ಸಾಫ್ಟ್‌ವೇರ್ ಅಳವಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.