Tuesday, April 22, 2025
Google search engine

Homeರಾಜ್ಯಅವ್ಯವಸ್ಥೆಯ ಆಗರವಾದ ಕೆ. ಹೊನ್ನಲಗೆರೆ ಅಟಲ್ ಜೀ ಕೇಂದ್ರ: ಸಾರ್ವಜನಿಕರ ಆಕ್ರೋಶ

ಅವ್ಯವಸ್ಥೆಯ ಆಗರವಾದ ಕೆ. ಹೊನ್ನಲಗೆರೆ ಅಟಲ್ ಜೀ ಕೇಂದ್ರ: ಸಾರ್ವಜನಿಕರ ಆಕ್ರೋಶ

ಮದ್ದೂರು: ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಅಟಲ್ ಜೀ ಜನಸ್ನೇಹಿ ಕೇಂದ್ರ (ನಾಡ ಕಚೇರಿ) ಅವ್ಯವಸ್ಥೆ ಅಗರವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮದ್ದೂರು ತಾಲೂಕಿನ ಕಸಬಾ ಕಂದಾಯ ವಿಭಾಗದ ಎರಡನೇ ವೃತ್ತಕ್ಕೆ ಒಳಪಡುವ ಹತ್ತಾರು ಹಳ್ಳಿಗಳ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವಯೋವೃದ್ಧರು, ಕಂದಾಯ ಇಲಾಖೆ ಹಾಗೂ ಇನ್ನಿತರೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಕೆ. ಹೊನ್ನಲಗೆರೆ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಆಗಮಿಸುತ್ತಿರುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆಗಳಿಂದಾಗಿ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೆ ಹೊನ್ನಲಗೆರೆ ಗ್ರಾಪಂ ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಸಬಾ ಎರಡರ ನಾಡ ಕಚೇರಿಯ ಕೊಠಡಿಯ ಚಾವಣಿ ಪದರ ನಿತ್ಯ ಕಳಚಿ ಬೀಳುತ್ತಿದ್ದು, ಇಲ್ಲಿನ ಸಿಬ್ಬಂದಿ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಪಂ ಕಚೇರಿಯ ಅನುಪಯುಕ್ತ ಕಾಗದ ಪತ್ರಗಳು, ಕೊಳವೆ ಬಾವಿ ಅನುಪಯುಕ್ತ ಸಾಮಗ್ರಿಗಳ ಸಂಗ್ರಹವು ಇದೇ ಕೊಠಡಿಯಲ್ಲಿರುವುದು ಇಲ್ಲಿನ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.

ಕುಡಿಯುವ ನೀರು , ಶೌಚಾಲಯ, ಪೀಠೋಪಕರಣಗಳು ಗಣಕ ಯಂತ್ರ ಸಿಬ್ಬಂದಿ ಕೊರತೆ ಬಹಳ ಹಿಂದಿನಿಂದಲೂ ವಿದ್ಯುತ್ ಸ್ಥಗಿತಗೊಂಡರೆ ಕೆಲಸ ಸ್ಥಗಿತಗೊಳ್ಳುತ್ತದೆ. ಅವಶ್ಯವಿರುವ ಜನರೇಟರ್ ಅಥವಾ ಯುಪಿಎಸ್ ವ್ಯವಸ್ಥೆ ಕೂಡ ಇಲ್ಲ.

ಮದ್ದೂರು ತಾಲೂಕು ಕೇಂದ್ರ ಸ್ಥಾನಕ್ಕೆ ಹೊಂದಿಕೊಂಡಿರುವ ಚನ್ನೇಗೌಡನ ದೊಡ್ಡಿ, ಚನ್ನಸಂದ್ರ, ನಗರಕರೆ, ದೇಶಹಳ್ಳಿ, ಸೋಮನಹಳ್ಳಿ, ಮೊಬ್ಬಳಗೆರೆ, ಹಾಗೂ ಉಪ್ಪಿನಕೆರೆ, ಸಾದೊಳಲು, ಅಜ್ಜಹಳ್ಳಿ, ಹುಲಿಗರೆಪುರ, ಮಾಲಗಾರನಹಳ್ಳಿ, ಸೋಂಪುರ ಒಳಗೊಂಡಂತ ಹತ್ತಾರು ಹಳ್ಳಿಗಳು ಕೆ. ಹೊನ್ನಲಗೆರೆ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಸೇರಿದ್ದು, ನಿತ್ಯದ ಕೆಲಸ ಕಾರ್ಯಗಳಿಗೆ 20 ಕಿಲೋಮೀಟರ್ ಸುತ್ತಿ ಬಳಸಿ ಇಲ್ಲಿಗೆ ಹೋಗಬೇಕಾಗಿದೆ.

ನಾನಾ ನಮೂನೆಯ ಅರ್ಜಿ ಸಲ್ಲಿಕೆ (ಆನ್‌ ಲೈನ್) ಆದಾಯ ಪ್ರಮಾಣ ಪತ್ರ, ಜನನ ಮರಣ ನೋಂದಣಿ, ಕೃಷಿ ದೃಢೀಕರಣ ಪತ್ರ, ಭೂಮಾಪನ ಸ್ಕೆಚ್ ದಾಖಲೆ ತಿದ್ದುಪಡಿ, ನಾನಾ ಯೋಜನೆಗಳಲ್ಲಿ ಪಿಂಚಣಿ ವಿಧವೆ ಮತ್ತು ವೃದ್ಧಾಪ್ಯವೇತನ ಅರ್ಜಿ ಸಲ್ಲಿಕೆ ಇತ್ಯಾದಿ ವ್ಯವಹಾರಗಳಿಗೆ ಮದ್ದೂರು ಪಟ್ಟಣವನ್ನು ಕೆ.ಹೊನ್ನಲಗರ ಗ್ರಾಮಕ್ಕೆ ತೆರಳಬೇಕಾಗಿದೆ.

ಅಟಲ್ ಜೀ ಕೇಂದ್ರ ಆರಂಭದ ದಿನಗಳಲ್ಲಿ ಮದ್ದೂರು ಪಟ್ಟಣ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಮಸ್ಥರು ತಕರಾರು ವ್ಯಕ್ತಪಡಿಸಿದ ಸಂದರ್ಭದಲ್ಲಿ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ, ಜಿಲ್ಲಾ ಹಾಗೂ ತಾಲೂಕು ಆಡಳಿತ ನಿರ್ಲಕ್ಷ ಮುಂದುವರಿಸಿದ್ದು, ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ. ಸಾವಿರಾರು ಸಾರ್ವಜನಿಕರ ಪಡಿಪಾಟಲು ಹೇಳತೀರಾಗಿದೆ. ಇನ್ನಾದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ಇತ್ತ ತುರ್ತು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular