ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಲು ದೆಹಲಿ ಹೈಕೋರ್ಟ್ ಇಂದು ಗುರುವಾರ ನಿರಾಕರಿಸಿದೆ.
ಒಂದು ವಾರದ ಹಿಂದೆ, ಕೇಜ್ರಿವಾಲ್ ಅವರು ಮದ್ಯ ನೀತಿ ಪ್ರಕರಣದಲ್ಲಿ ಇಡಿ ಕಸ್ಟಡಿಯಲ್ಲಿರುವ ಕಾರಣ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಹೊಸ ಪಿಐಎಲ್ ಸಲ್ಲಿಸಲಾಗಿದೆ. ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಪಿಐಎಲ್ ಸಲ್ಲಿಸಿದ್ದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠವು ಗುಪ್ತಾ ಅವರ ಅರ್ಜಿಯನ್ನು ವಜಾಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ದೆಹಲಿ ಹೈಕೋರ್ಟ್ ಎರಡನೇ ಬಾರಿಗೆ ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿದ್ದ ಅರ್ಜಿ ವಜಾಗೊಳಿಸಿದೆ. ಈ ಹಿಂದೆ ಮಾರ್ಚ್ ೨೮ರಂದು ಹೈಕೋರ್ಟ್ ಇದೇ ವಿಚಾರವಾಗಿ ಸುರ್ಜಿತ್ ಸಿಂಗ್ ಯಾದವ್ ಎಂಬವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.