ಬೆಂಗಳೂರು: ಜಲಮಂಡಳಿಯಿಂದ ಇಸ್ರೋ, ಬಿಬಿಎಂಪಿ, ಲೋಕಾಯುಕ್ತ ಕಚೇರಿ ಸೇರಿದಂತೆ ಹಲವೆಡೆಗಳಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವ ಕಾರ್ಯ ಚುರುಕುಗೊಳಿಸಬೇಕಿದೆ. ಜಲಮಂಡಳಿಯು ಈವರೆಗೆ ೪,೦೦೦ ನಲ್ಲಿಗಳಿಗೆ ಏರಿಯೇಟರ್? ಅಳವಡಿಕೆ ಮಾಡಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ನೀರು ಪೂರೈಕೆಯಲ್ಲಿ ಕೊರತೆ ಸಮಸ್ಯೆ ಆಗಿದೆ. ಬೇಸಿಗೆ ಕಾರಣ ಅಂತರ್ಜಲ ಕುಸಿದಿದ್ದು, ನೀರಿನ ಮಿತ ಬಳಕೆಗೆ ಜಲಮಂಡಳಿ ಆದ್ಯತೆ ನೀಡಿದೆ. ಇದರ ಭಾಗವಾಗಿ ಹೆಚ್ಚು ಜನರ ಸೇರುವ ಪ್ರದೇಶಗಳಲ್ಲಿ ನಲ್ಲಿಗಳಿಗೆ ಮೀತ ನೀರಿನ ಬಳಕೆಗೆ ಆಸರೆಯಾಗುವ ಏರಿಯೇಟರ್ ಅಳವಡಿಕೆ ಕಾರ್ಯ ಮತ್ತಷ್ಟು ಚುರುಕು ಪಡೆದಿದೆ. ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವಂತಹ ಸರಕಾರಿ ಕಚೇರಿಗಳು ಹಾಗೂ ನಗರದ ಪ್ರಮುಖ ಸಂಸ್ಥೆಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಸರಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್ ಹಾಗೂ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಿದ್ದೇವೆ. ಈ ಹಿನ್ನೆಲೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಸರಕಾರಿ ಕಚೇರಿಗಳಲ್ಲಿ ಏರಿಯೇಟರ್‌ಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಬೆಂಗಳೂರು ಜಲಮಂಡಳಿಯ ಎಲ್ಲ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿದೆ.
ಈ ಹಿನ್ನೆಲೆ ಸುತ್ತೋಲೆ ಹೊರಡಿಸುವ ಮುನ್ನವೇ ನಮ್ಮ ಜಲಮಂಡಳಿ ಕಚೇರಿಗಳಲ್ಲಿ ಈ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಸ್ರೋ, ಬಿಬಿಎಂಪಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿದೆ. ಎಲ್ಲ ಸರಕಾರಿ ಕಚೇರಿಗಳ ನಲ್ಲಿಗಳಿಗೂ ಮೀತ ನೀರಿನ ಬಳಕೆಗೆ ಸಹಾಯವಾಗುವ ಈ ಏರಿಯೇಟರ್‌ನ್ನು ಅಳವಡಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಗ್ರಾಹಕರಿಂದಲೇ ತಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.