ತುಮಕೂರು: ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ದಮನ ಮಾಡಿ, ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಅಪಾಯದಲ್ಲಿರುವ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರುನಲ್ಲಿ ಇಂದು ನಗರದ ಟೌನ್‌ಹಾಲ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡರ ನಾಮಪತ್ರ ಸಲ್ಲಿಸುವ ವೇಳೆ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪದೇ ಪದೆ ಸಂವಿಧಾನ ಬದಲಾವಣೆಯ ವಿಚಾರಗಳನ್ನು ಬಿಜೆಪಿ ಸಂಸದರು ಮಾತನಾಡುತ್ತಿದ್ದರೂ ಮೌನ ವಹಿಸಿ, ಅವರ ಮಾತುಗಳಿಗೆ ಕುಮ್ಮಕ್ಕು ನೀಡುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿಕೊಂಡಿರುವ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದರು.
ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಅಸತ್ಯ ಎಷ್ಟೇ ವಿಜೃಂಭಿಸಿದರೂ, ಕೊನೆಗೆ ಸತ್ಯಕ್ಕೆ ಗೆಲುವು. ಹಾಗಾಗಿ ಸರಳ, ಸಜ್ಜನ ಹಾಗೂ ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿರುವ ಎಸ್.ಪಿ. ಮುದ್ದಹನುಮೇಗೌಡ ಅವರು ಗೆಲ್ಲಬೇಕಿದೆ. ಆ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕೊಬ್ಬರಿ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.