ಗುಂಡ್ಲುಪೇಟೆ: ಪಟ್ಟಣದ ಪುರಸಭೆಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲು ಶ್ರಮ ವಹಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ಪಟ್ಟಣದ ಕೊತ್ವಾಲ್ ಚಾವಡಿ ವೃತ್ತದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಾಗ್ರಿ ವಿತರಣೆ ಹಾಗೂ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೊದಲು ಬಾರಿಗೆ ಗೆದ್ದಿರುವ ಹಿನ್ನೆಲೆ ಜನರಿಗೆ ನನ್ನ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ಕೇತ್ರದ ಅಭಿವೃದ್ಧಿ ಕಡೆಗೆ ಆದ್ಯತೆ ನೀಡಲಾಗುವುದು ಎಂದರು.
ಚುನಾವೆಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಅನುಷ್ಟಾನ ಸಾಕಷ್ಟು ತೊಡಕಿಗಳಾಗುತ್ತಿದೆ. ಜೊತೆಗೆ ಸಮಯವೂ ಕೂಡ ವ್ಯರ್ಥವಾಗುತ್ತಿದೆ. ಏನೇ ಸಮಸ್ಯೆಯಾದರೂ ಐದು ಭರವಸೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ. ಕೇಂದ್ರದಿಂದ ಏನೇ ನಿರ್ಧಾರ, ತೊಂದರೆ ಬಂದರು ಸರಿ ಅದನ್ನು ಮೆಟ್ಟಿನಿಂತು ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಲಿದೆ ಎಂದು ತಿಳಿಸಿದರು.
ಪಟ್ಟಣದ ಅಭಿವೃದ್ಧಿ ಸಂಬಂಧ ಈಗಾಗಲೇ ಪುರಸಭೆ ಅಧಿಕಾರಿಗಳು ಹಾಗು ಸದಸ್ಯರ ಜೊತೆ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಟ್ರಾಫಿಕ್ ಸಮಸ್ಯೆ ಸಾಕಷ್ಟಿದ್ದು, ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪಟ್ಟಣಕ್ಕೆ ಕಬಿನಿಯಿಂದ ಕುಡಿಯುವ ನೀರಿನ ಎಕ್ಸ್ ಪ್ರೆಸ್ ಲೈನ್ ಯೋಜನೆ ಶೀಘ್ರ ಜಾರಿಯಾಗಲಿದೆ. ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡಲು ಯೋಜನೆ ರೂಪಿಸಲಾಗಿದ್ದು, ಪಟ್ಟಣವನ್ನು ಸ್ವಚ್ಛವಾಗಿಡಲು ಕ್ರಮ ವಹಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿಯೂ ಕೂಡ ಕೆಲಸ ಮಾಡುತ್ತಿದ್ಧೇನೆ ಎಂದರು.
ಪಟ್ಟಣದ ಮಡಹಳ್ಳಿ ವೃತ್ತದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲಾಗಿದ್ದು, ಮುಖ್ಯ ರಸ್ತೆಯಲ್ಲಿ ಸ್ಲಾಬ್ ನಿರ್ಮಾಣ, ಹೆದ್ಧಾರಿ ರಸ್ತೆಯ ಬೀದಿ ದೀಪ ದುರಸ್ತಿಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ನಂತರ ರಾಜಕೀಯ ಅನಾವಶ್ಯಕ. ಆದ್ದರಿಂದ ಪಕ್ಷವನ್ನು ಬಿಟ್ಟು ಪಟ್ಟಣ ಅಭಿವೃದ್ಧಿ ಪಡಿಸಲು ಪ್ರತಿಯೊಬ್ಬರು ಕೈಜೋಡಿಸಿ ಎಂದು ಮನವಿ ಮಾಡಿದರು.
ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭೆ ಸದಸ್ಯ ರಮೇಶ್, ಚಂದ್ರು, ವಿಜಯಕುಮಾರ್, ಮುರಳಿ, ಬಿಜ್ರೆಶ್ ಸೇರಿದಂತೆ ಇತರರು ಹಾಜರಿದ್ದರು.