ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕ್ಷಯರೋಗವು ವಿಶ್ವದ ಒಂದು ಪಿಡುಗಾಗಿದ್ದು, ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಬಹಳಷ್ಟು ಕಾಡುತ್ತಿದೆ. ಪ್ರಪಂಚದ ಶೇ ೨೭ % ಕ್ಷಯ ರೋಗಿಗಳು ಭಾರತದಲ್ಲಿಯೇ ಇದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ವಿಷಾದ ವ್ಯಕ್ತಪಡಿಸಿದರು. ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಹಾಗೂ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಪ್ರತಿ ವರ್ಷ ಒಬ್ಬ ಕ್ಷಯರೋಗಿ ೧೦ ರಿಂದ ೧೫ ಜನಕ್ಕೆ ರೋಗವನ್ನು ಹರಡುತ್ತಾನೆ. ಹೆಚ್.ಐ.ವಿ. ಧೂಮಪಾನಿಗಳಲ್ಲಿ ,ಸಕ್ಕರೆ ಖಾಯಿಲೆ ಇರುವವರಲ್ಲಿ ಕ್ಷಯರೋಗ ಬೇಗ ಹರಡುತ್ತದೆ, ರೋಗ ಪತ್ತೆಯಾದ ಕೂಡಲೇ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗಿಯು ಎರಡರಿಂದ -ಮೂರು ವರ್ಷದಲ್ಲಿ ಸಾಯುತ್ತಾನೆ ಹಾಗಾಗಿ ೨೦೨೫ ಕ್ಕೆ ಕ್ಷಯ ರೋಗ ಮುಕ್ತ ಭಾರತವನ್ನಾಗಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ ಆದ್ದರಿಂದ ನಿಮ್ಮಗಳ ಸಹಕಾರ, ಸೇವೆ ಅತ್ಯಗತ್ಯ ಎಂದು ಸಭೆಯಲ್ಲಿದ್ದ ವೈದ್ಯಾಧಿಕಾರಿಗಳಿಗೆ ಹಾಗು ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಿದರು.
ಕಳೆದ ಸಾಲಿನಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ೧೧೨ ಪ್ರಕರಣಗಳಿದ್ದು , ೭೯ ಪುರುಷರು ಮತ್ರು ೩೯ ಮಹಿಳೆರಿದ್ದಾರೆ, ಕ್ಷಯರೋಗದ ಜೊತೆ ೪ ಹೆಚ್.ಐ.ವಿ,ಪ್ರಕರಗಳು ಇದ್ದು ಎಲ್ಲರಿಗೂ ಸಮರ್ಪಕ ಚಿಕಿತ್ಸೆ ನೀಡಲಾಗಿದ್ದು ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು. ಈಗ್ಗೆ ನಡೆದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿಯಾಗಿದ್ದು, ೨೦೦೦ ಸಾವಿರಕ್ಕೂ ಹೆಚ್ಚು ಕಫ ಪರೀಕ್ಷೆ ಮಾಡಲಾಗಿದ್ದು ,೪೧ ಪ್ರಕಣಗಳು ಪತ್ತೆಯಾಗಿವೆ, ಅವರಿಗೆಲ್ಕ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು ತಿಳಿಸಿದರು.
೨೦೨೪-೨೫ ನೇ ಸಾಲಿನಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನ ಎಲ್ಲಾ ೩೪ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಆರೋಗ್ಯ ಇಲಾಖೆ ಪಣ ತೊಟ್ಟಿದ್ಸು ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ನಮ್ಮ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ತಲುಪಸಿದಾಗ ರೋಗಮುಕ್ತ ಗ್ರಾಮ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಾಲಿಗ್ರಾಮ ಸಮುದಾಯ ಆರೋಗ್ಯಕೇಂದ್ರದ ಡಾ, ಮಂಜುನಾಥ್, ಪಟ್ಟಣದ ತಾ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ರವಿಕುಮಾರ್ ಮತ್ತು ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಭವ್ಯಶ್ರೀ ಅವರನ್ನು ಗೌರವಿಸಿ ಪುರಸ್ಕಾರ ನೀಡಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಇದ್ದರು.