ಧಾರವಾಡ : ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮೇ 7 ರಂದು ಮತದಾನ ಜರುಗಲಿದ್ದು, ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿದ್ದು, ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ ಮತ್ತು ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಮೇ 07, 2024 ರಂದು ಮತದಾನ ನಡೆಯಲಿದ್ದು, ಜೂನ್ 04 ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಏಣಿಕಾ ಕೇಂದ್ರದಲ್ಲಿ ಮತ ಏಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.
ಮತಗಟ್ಟೆಗಳ ವಿವರ : ನವಲಗುಂದ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 234, ಕುಂದಗೋಳ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 214, ಧಾರವಾಡ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 234, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 217, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 260, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 273, ಕಲಘಟಗಿ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 228, ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 241 ಮತಗಟ್ಟೆಗಳಿವೆ. ಒಟ್ಟಾರೆಯಾಗಿ 8 ವಿಧಾನ ಸಭಾ ಮತ ಕ್ಷೇತ್ರದಲ್ಲಿ 1901 ಮತಗಟ್ಟೆಗಳಿಗೆ ಎಂದು ಚುನಾವಾಧಿಕಾರಿಗಳು ತಿಳಿಸಿದ್ದಾರೆ.
ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಗಮನಿಸುವ ಅಂಶಗಳು: ಚುನಾವಣಾಧಿಕಾರಿಗಳ ಕಚೇರಿ (ಜಿಲ್ಲಾಧಿಕಾರಿಗಳ ಕಚೇರಿ) ಸುತ್ತಮುತ್ತಲು 200 ಮೀ. ವ್ಯಾಪ್ತಿಯಲ್ಲಿ ಗಡಿ ಗುರುತಿಸಿ, 100 ಮೀ. ವ್ಯಾಪ್ತಿಯನ್ನು ನಿರ್ಭಂದಿತ ಪ್ರದೇಶವನ್ನಾಗಿ ಗುರುತಿಸಲಾಗಿದೆ. 100ಮೀ ನಿರ್ಭಂದಿತ ಪ್ರದೇಶದ ವ್ಯಾಪ್ತಿಯೊಳಗಡೆ ನಾಮಪತ್ರ ಸಲ್ಲಿಸಲು ಕೇವಲ 3 ವಾಹನಗಳಿಗೆ ಮಾತ್ರ ಅವಕಾಶವಿದ್ದು, ಅಭ್ಯರ್ಥಿಯ ವಾಹನಗಳು ಕಡ್ಡಾಯವಾಗಿ ಅನುಮತಿ ಪಡೆದ ವಾಹನಗಳಾಗಿರಬೇಕು ಹಾಗೂ ವಾಹನಗಳ ಮೇಲೆ ಅನುಮತಿ ಪತ್ರವನ್ನು ಲಗತ್ತಿಸಿರಬೇಕು. ಮೂರು ವಾಹನಗಳಿಗೆ ಚುನಾವಣಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದ ಗೇಟಿನವರೆಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಯ ಒಳಗಡೆ ಪ್ರವೇಶಿಸಲು ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಅವಕಾಶವಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.