ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಆರ್‌ಸಿಬಿಯ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶುಭಮನ್ ಗಿಲ್ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ೩೦೦೦ ರನ್‌ಗಳನ್ನು ಪೂರ್ಣಗೊಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. ಆ ಮೂಲಕ ಶುಭಮನ್ ಗಿಲ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ದಾಖಲೆ ಬರೆದ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ೨೬ನೇ ವರ್ಷ, ೮೧೬ ದಿನಗಳ ವಯಸ್ಸಿನಲ್ಲಿ ಕೊಹ್ಲಿ ೩೦೦೦ ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಗಿಲ್ ತನ್ನ ೨೪ನೇ ವಯಸ್ಸಿನಲ್ಲಿ ಇಷ್ಟು ರನ್‌ಗಳನ್ನು ಕಲೆ ಹಾಕಿದ್ದಾರೆ.

ಶುಭಮನ್ ಗಿಲ್ ೩೦೦೦ ಐಪಿಎಲ್ ರನ್‌ಗಳನ್ನು ೯೪ ಇನಿಂಗ್ಸ್‌ಗಳಲ್ಲಿ ಗಳಿಸಿದ್ದಾರೆ. ಕೆಎಲ್ ರಾಹುಲ್ ಬಳಿಕ ಎರಡನೇ ಅತ್ಯಂತ ವೇಗವಾಗಿ ಗಿಲ್ ಈ ಸಾಧನೆ ಮಾಡಿದ್ದಾರೆ. ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ ೧೯೭ ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ಪರ ಅತ್ಯುತ್ತಮ ಬ್ಯಾಟ್ ಮಾಡಿದ ಶುಭಮನ್ ಗಿಲ್ ಸ್ಪೋಟಕ ಅರ್ಧಶತಕವನ್ನು ಸಿಡಿಸಿದರು. ಎದುರಿಸಿದ ಕೇವಲ ೪೪ ಎಸೆತಗಳಲ್ಲಿ ೬ ಬೌಂಡರಿಗಳು ಹಾಗೂ ಎರಡು ಸಿಕ್ಸರ್‌ಗಳ ಮೂಲಕ ೭೨ ರನ್‌ಗಳನ್ನು ಪೇರಿಸಿದರು. ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.