ಚಾಮರಾಜನಗರ: ವಿಶ್ವದ ಆಧ್ಯಾತ್ಮಿಕ ಶಕ್ತಿ ಹಾಗೂ ತಪಸ್ಸಿನ ಕೇಂದ್ರ. ಆಧ್ಯಾತ್ಮ ರಹಸ್ಯವನ್ನು ತನ್ನ ತಪೋಶಕ್ತಿಯ ಮೂಲಕ ಇಡೀ ಜಗತ್ತಿಗೆ ನೀಡಿ ಮಾರ್ಗದರ್ಶನವನ್ನು ನೀಡುತ್ತಿರುವ ಭಾರತ ಹೆಮ್ಮೆಯ ರಾಷ್ಟ್ರವಾಗಿದೆ. ಸಾವಿರಾರು ಋಷಿಗಳು, ಮಹರ್ಷಿಗಳು ,ತಪಸ್ವಿಗಳು, ದಾರ್ಶನಿಕರು, ಚಿಂತಕರು ವೇದಾಂತಿಗಳು ತಮ್ಮ ಧೀ: ಶಕ್ತಿಯ ಅಂತರ್ಜ್ಞಾನದ ಮೂಲಕ ದಿವ್ಯ ರಹಸ್ಯಗಳನ್ನು, ಆಧ್ಯಾತ್ಮ ಚಿಂತನೆಗಳನ್ನು ,ದರ್ಶನಗಳನ್ನು, ವೇದಾಂತಗಳನ್ನು ನೀಡಿ ಜಗತ್ತಿಗೆ ನೀಡಿದ್ದಾರೆ.
ಭಾರತ ಸನಾತನ ಧರ್ಮದ ಮೂಲಕ ವಿಶ್ವಕ್ಕೆ ಅಮೂಲ್ಯವಾದ ಸಾಹಿತ್ಯವನ್ನು ,ಸಂಸ್ಕೃತಿಯನ್ನು ಪರಂಪರೆಯ ಜ್ಞಾನವನ್ನು ನೀಡಿ ಮಾನವ ಶಕ್ತಿಯನ್ನು ಉನ್ನತಿಗೊಳಿಸಿದ ರಾಷ್ಟ್ರವಾಗಿದೆ.
೧೨೦೦ ವರ್ಷಗಳ ಹಿಂದೆ ಭಾರತೀಯ ಸನಾತನ ಧರ್ಮವು ಗೊಂದಲದಲ್ಲಿ ಸಿಲುಕಿ ಅವಸಾನದ ಕಡೆ ಸಾಗುವ ಸಂದರ್ಭದಲ್ಲಿ ಪುನರುಸ್ತಾನಗೊಳಿಸಲು ಪರಮೇಶ್ವರನೇ ಶ್ರೀ ಶಂಕರ ಭಗವದ್ಪಾದರ ಅವತಾರದಲ್ಲಿ ಕೇರಳದ ಕಾಲಟಿ ಎಂಬ ಕ್ಷೇತ್ರದಲ್ಲಿ ೭೮೮ ರಲ್ಲಿ ಅವತರಿಸಿ ಭಾರತೀಯ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿ ಶಾಶ್ವತವಾಗಿ ಧರ್ಮವನ್ನು ಉಳಿಸಿದವರು ಜಗದ್ಗುರು ಶ್ರೀ ಶಂಕರಾಚಾರ್ಯರು.
ತಮ್ಮ ೩೨ ವರ್ಷಗಳ ಅವಧಿಯಲ್ಲಿ ಇಡೀ ಭಾರತವನ್ನು ಮೂರು ಬಾರಿ ಕಾಲ್ನಡಿಗೆಯಲ್ಲಿ ಸಂಚರಿಸಿ ಸನಾತನ ಧರ್ಮವನ್ನು ಮತ್ತು ಅದ್ವೈತ ಸಿದ್ದಾಂತಗಳನ್ನು ಜಗತ್ತಿಗೆ ನೀಡಿ ಭಾರತದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಪುರಿ ,ದ್ವಾರಕ, ಬದರಿ ,ಶೃಂಗೇರಿ ಕ್ಷೇತ್ರಗಳಲ್ಲಿ ಮಠ ಸ್ಥಾಪನೆಯನ್ನು ಮಾಡಿ ನಾಲ್ಕು ವೇದಗಳನ್ನು ಹಾಗೂ ಪರಂಪರೆಯನ್ನು ಬೆಳೆಸಿದವರು. ಅವುಗಳಲ್ಲಿ ದಕ್ಷಿಣ ದಿಕ್ಕಿನಲ್ಲಿ ಸ್ಥಾಪನೆ ಮಾಡಿದ ಪೀಠವೇ ದಕ್ಷಿಣಾಮಯ ಶ್ರೀ ಶೃಂಗೇರಿ ಶಾರದಾ ಪೀಠ.
ಶೃಂಗೇರಿ ಶಾರದಾ ಪೀಠಕ್ಕೆ ಮೊದಲ ಅಧಿಪತಿಗಳಾಗಿ ಶ್ರೀ ಸುರೇಶ್ವರಾಚಾರ್ಯ ನೇಮಿಸಿ ಅಂದಿನಿಂದಲೂ ಗುರು ಪರಂಪರೆಯು ಅವಿಚಿನ್ನವಾಗಿ ನಡೆದು ಬಂದಿದೆ. ಶ್ರೀ ವಿದ್ಯಾರಣ್ಯರಂತಹ ಮಹಾ ತಪಸ್ವಿಗಳು ,ಚಂದ್ರಶೇಖರ ಭಾರತಿ ರಂತಹ ಶ್ರೇಷ್ಠ ಆಧ್ಯಾತ್ಮ ತಪಸ್ವಿಗಳು ವೇದಶಾಸ್ತ್ರ , ಯತಿ ಶ್ರೇಷ್ಠರಿಂದ ಶೃಂಗೇರಿ ಶಾರದಾ ಪೀಠವು ಇಡೀ ಜಗತ್ತಿಗೆ ಮಾದರಿಯಾಗಿದೆ. ಆಧ್ಯಾತ್ಮ ಧರ್ಮ ಮತ್ತು ಮಾರ್ಗದರ್ಶನದ ಮೂಲಕ ಇಡೀ ಜಗತ್ತಿಗೆ ಶ್ರೇಷ್ಠವಾದಂತಹ ಯತಿ ಪರಂಪರೆಯನ್ನು ನೀಡಿರುವ ಶ್ರೀ ಕ್ಷೇತ್ರ ಶೃಂಗೇರಿ.
ಶ್ರೀ ಶಾರದಾ ಪೀಠದಲ್ಲಿ ೧,೨೦೦ ವರ್ಷಗಳಿಂದ ನಿರಂತರವಾಗಿ ಧರ್ಮರಕ್ಷಣೆಯ ಕಾರ್ಯವನ್ನು ನೀಡುತ್ತಿರುವ ಯತಿ ಶ್ರೇಷ್ಠರ ಪರಂಪರೆ ನಡೆದು ಬಂದಿದೆ. ೩೬ನೆಯ ಪೀಠಾಧಿಪತಿಗಳಾಗಿ ಇಂದು ಪೀಠದಲ್ಲಿ ವಿರಾಜಮಾನ ರಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರು ಸಕಲ ಮಾನವ ಕುಲಕ್ಕೆ ತಮ್ಮ ತಪಶಕ್ತಿಯಿಂದ ಮಾರ್ಗದರ್ಶನ, ಆಶೀರ್ವಾದ ,ಧರ್ಮ ರಕ್ಷಣೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.
ಅದ್ವಿತೀಯ ಜ್ಞಾನಿಗಳು, ಶಾಸ್ತ್ರ ಪಾಂಡಿತ್ಯರು, ಬಹುಭಾಷಾ ವಿದ್ವಾಂಸರು ,ವೇದ ,ಉಪನಿಷತ್ತು ಪುರಾಣಗಳ ಅಪಾರ ಜ್ಞಾನ ,ಧ್ಯಾನ, ಚಿಂತನೆ, ಶಿಷ್ಯ ಜನರಲ್ಲಿ ವಾತ್ಸಲ್ಯ ಧಾರ್ಮಿಕ ವಿಧಿ ವಿಧಾನಗಳಿಗೆ ಎಲ್ಲಿಯೂ ಲೋಪ ಬಾರದಂತೆ ಮುನ್ನಡೆಸಿಕೊಂಡು ಬರುತ್ತಿರುವ ಭಾರತೀಯ ತೀರ್ಥ ಮಹಾಸ್ವಾಮಿಗಳವರು ಇಡೀ ಭಾರತದ ವಿಜಯ ಯಾತ್ರೆ ಧರ್ಮಯಾತ್ರೆ ಮೂಲಕ ಹಲವಾರು ಬಾರಿ ಸಂಚರಿಸಿ ಮೂಲೆ ಮೂಲೆಗಳಲ್ಲೂ ಧರ್ಮ ಸಂದೇಶವನ್ನು ನೀಡುತ್ತಾ ಭಾರತದ ಸನಾತನ ಧರ್ಮ ಇಂದಿಗೂ ಅಮೂಲ್ಯವಾಗಿ ಉಳಿದಿರಲು ಭಾರತೀ ತೀರ್ಥ ಮಹಾಸ್ವಾಮಿಗಳವರ ಕೊಡುಗೆ ಅಪಾರವಾದದ್ದು.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ನರಸರಾವುಪೇಟೆ ಎಂಬ ಸ್ಥಳದಲ್ಲಿ ಸಂಪ್ರದಾಯ ಶ್ರದ್ಧೆಯುಳ್ಳ ವೈದಿಕ ಕುಟುಂಬದ ಶ್ರೀ ವೆಂಕಟೇಶ್ವರ ಅವಧಾನಿಗಳು ಹಾಗೂ ಶ್ರೀಮತಿ ಅನಂತಲಕ್ಷ್ಮಮ್ಮ ಪುಣ್ಯ ದಂಪತಿಗಳ ಪುತ್ರರಾಗಿ ಏಪ್ರಿಲ್ ೧೧ ,೧೯೫೧ರ ಖರ ನಾಮ ಸಂವತ್ಸರ ಚೈತ್ರ ಶುದ್ಧ ಷಷ್ಟಿ ಬುಧವಾರದಂದು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಸೀತಾ ರಾಮಾಂಜನೇಯಲು. ಬಾಲ್ಯದಿಂದಲೂ ಭಗವಂತನಲ್ಲಿ ಅಪಾರ ಭಕ್ತಿ, ವಿಷಯಗಳಲ್ಲಿ ಪಾಂಡಿತ್ಯ, ಸತ್ಪುರುಷರಲ್ಲಿ ಆಸಕ್ತಿ, ಗುರು ಪರಂಪರೆಯ ಬಗ್ಗೆ ಗೌರವ ಹೊಂದಿದ್ದ ಇವರು ೧೯೬೧ ರಲ್ಲಿ ಆಗಿನ ಶೃಂಗೇರಿ ಶಾರದಾ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ವಿದ್ಯಾ ತೀರ್ಥರು ಧರ್ಮ ಯಾತ್ರೆ ಮಾಡುವ ಸಂದರ್ಭದಲ್ಲಿ ಜಗದ್ಗುರುಗಳ ದರ್ಶನವನ್ನು ಮಾಡಿದ ಬಾಲಕ ಸೀತಾರಾಮ ಆಂಜನೇಯಲು ಜಗದ್ಗುರುಗಳೊಂದಿಗೆ ಸಂಸ್ಕೃತದಲ್ಲಿ ಮಾತನಾಡಿದರು. ಗುರುಗಳ ಅನುಗ್ರಹ ,ಅಧ್ಯಯನ ,ಗುರುಭಕ್ತಿ ಧರ್ಮದ ಉಳಿವಿಗಾಗಿ ಶರಣಾಗತಿ, ಸತತ ಪರಿಶ್ರಮ ,ಗುರು ನಿಷ್ಠೆ, ಏಕಾಗ್ರತೆ ಸಕಲ ಶಾಸ್ತ್ರಗಳ ನಿಷ್ಣಾಥ ರಾದ ಇವರನ್ನು ಶಾರದಾದೇವಿಯ ಪ್ರೇರಣೆಯಂತೆ ಶ್ರೀ ಜಗದ್ಗುರು ಅಭಿನವ ವಿದ್ಯಾ ತೀರ್ಥ ಮಹಾಸ್ವಾಮಿಗಳವರು ೧೯೭೪ ನವೆಂಬರ್ ೧೧ರಂದು ಆನಂದ ನಾಮ ಸಂವತ್ಸರದ ಆಶ್ರಯದ ಬಹುಲ ದ್ವಾದಶಿ ಯಂದು ಸನ್ಯಾಸಾಶ್ರಮವನ್ನು ಅನುಗ್ರಹಿಸಿ ಭಾರತೀ ತೀರ್ಥ ಯೋಗ ಪಟ್ಟವನ್ನು ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದರು.
೧೯೮೯ ರಲ್ಲಿ ಗುರು ಪ್ರೇರಣೆಯಂತೆ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರು ೩೬ನೆಯ ಅಧಿಪತಿಗಳಾಗಿ ಪಟ್ಟಾಭಿಷೇಕರಾದರು. ಆಧ್ಯಾತ್ಮದ ಮುನ್ನಡೆ, ಧಾರ್ಮಿಕ ಚಿಂತನೆ, ಸಾಮಾಜಿಕ ಕಾರ್ಯ ಯೋಜನೆಗಳ ಮೂಲಕ ಇಡೀ ಶೃಂಗೇರಿ ಪೀಠವನ್ನು ವಿಶ್ವವಿಖ್ಯಾತಿಗೊಳಿಸಿದವರು. ಕೋಟಿ ಕೋಟಿ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ಶಾರದಾ ಪೀಠ ಇವರ ಅವಧಿಯಲ್ಲಿ ಅಪಾರ ಅಭಿವೃದ್ಧಿಯನ್ನು ಸಾಧಿಸಿತು .ತುಂಗಾ ನದಿಗೆ ಸೇತುವೆಯ ನಿರ್ಮಾಣ, ಸುರ ಸರಸ್ವತಿ ಸಭಾ, ಶ್ರೀ ಶಂಕರ ಕೃಪಾ ಮಾಸಪತ್ರಿಕೆ ,ಕನ್ನಡ ತೆಲುಗು ಭಾಷೆಯ ತತ್ವ ಲೋಕ ಪತ್ರಿಕೆ ,ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಶೃಂಗೇರಿಯಲ್ಲಿ ವಸತಿ ಗೃಹ ನಿರ್ಮಾಣ , ಶಾಸ್ತ್ರ ಸಂವರ್ಧನೆ ಸಭಾ, ಶ್ರೀ ಮಹಾಗಣಪತಿ ವಾಕ್ಯಾರ್ಥ ಸಭೆ ಮೂಲಕ ವೇದ ವಿದ್ವಾಂಸರನ್ನು ಗೌರವಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು.
ಶಾರದಾ ಪೀಠದ ಮಹಾನ್ ಗೋಪುರ ನಿರ್ಮಾಣ, ಶ್ರೀಶಂಕರ ಅದ್ವೈತ ಶೋಧ ಕೇಂದ್ರವನ್ನು ಸ್ಥಾಪನೆ ಮಾಡುವ ಮೂಲಕ ಸಾವಿರಾರು ಗ್ರಂಥಗಳ ಸಂಗ್ರಹಣೆ ವೈಜ್ಞಾನಿಕ ರೂಪದಲ್ಲಿ ಸಂರಕ್ಷಣೆ ಪ್ರಕ್ರಿಯೆ ನಡೆದು ನೂರಾರು ವರ್ಷಗಳ ಅಮೂಲ್ಯ ಗ್ರಂಥಗಳನ್ನು ಸಂರಕ್ಷಿಸಿ ಮುದ್ರಿಸಿ ನೀಡುತ್ತಿರುವುದು ಅಪಾರ ಕೊಡುಗೆಯಾಗಿದೆ.
ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನಂ ಸ್ಥಾಪನೆಯ ಮೂಲಕ ಶ್ರೀ ಶಂಕರಾಚಾರ್ಯರ ತತ್ವಗಳನ್ನು, ಅಷ್ಟೋತ್ತರ ಪಾರಾಯಣ, ಸಾಮೂಹಿಕಭಜನೆ ,ಸ್ತೋತ್ರ,.ತತ್ತ್ವ ಪದಗಳನ್ನು ಮತ್ತು ಪ್ರವಚನಗಳನ್ನು ಏರ್ಪಡಿಸುವ ಮೂಲಕ ಲಕ್ಷಾಂತರ ಭಕ್ತರ ಮೂಲಕ ಮನೆ ಮನೆಗಳಲ್ಲೂ ಅದ್ವೈತ ತತ್ವಗಳ ಚಿಂತನೆ ಹಾಗೂ ಕಲಿಕೆಗೆ ಅವಕಾಶ ಮಾಡಿಕೊಡುವ ಮೂಲಕ ಸಾಮಾಜಿಕ, ಆಧ್ಯಾತ್ಮ ಜಾಗೃತಿಯ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಡಿನ ಎಲ್ಲಡೆ ಶಂಕರ ಜಯಂತಿಯನ್ನು ಜಾತಿ ಮತ ಪಂಥ ಭೇದವಿಲ್ಲದೆ ಆಚರಿಸುವ ಮೂಲಕ ಅದ್ವೈತ ಚಿಂತನೆಯ ಮೂಲಕ ಮಾನವ ಕಲ್ಯಾಣ ಹಾಗೂ ಸಮಗ್ರ ಅಭಿವೃದ್ಧಿಯ ಯೋಚನೆಗಳ ಮೂಲಕ ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಸ್ಥಾಪಿಸುವ ಮೂಲಕ ಭಾರತೀಯ ಸನಾತನ ಧರ್ಮ ಸಂಸ್ಕೃತಿ ಪರಂಪರೆ ಹಾಗೂ ಮಾನವ ಕಲ್ಯಾಣಕ್ಕಾಗಿ ಅಪರಿಮಿತವಾದ ಕೊಡುಗೆಯನ್ನು ನೀಡಿ ಇಡೀ ವಿಶ್ವಕ್ಕೆ ಆಧ್ಯಾತ್ಮದ ಮಾರ್ಗದರ್ಶನ ಶಾಂತಿ ನೆಮ್ಮದಿ ಹಾಗೂ ಲೋಕಕಲ್ಯಾಣದ ಚಿಂತನೆಯ ಮೂಲಕ ಮಹಾನ್ ಜಗದ್ಗುರುಗಳಾಗಿ ವಿರಾಜಮಾನರಾಗಿ ೭೪ ನೇ ಜಯಂತಿಯ ಮೂಲಕ ಶೃಂಗೇರಿಯ ಆಧ್ಯಾತ್ಮಿಕ ತಪಸ್ಸಿನ ಕೇಂದ್ರವಾಗಿ ಭಕ್ತ ಸಾಗರದ ಶಕ್ತಿಯಾಗಿ ಆಶೀರ್ವಾದವನ್ನು ನೀಡುತ್ತಿರುವ ಶ್ರೀ ಶ್ರೀ ಭಾರತಿ ತೀರ್ಥರು ಸಕಲ ಜಗದ್ವಂದ್ಯರು.
ಸುರೇಶ್ ಎನ್ ಋಗ್ಬೇದಿ
ಶ್ರೀ ಶಾಂಕರ ತತ್ತ್ವ ಪ್ರಸಾರ ಅಭಿಯಾನ. ಚಾಮರಾಜನಗರ.
೯೯೦೨೩೧೭೬೭೦
