ಮಂಗಳೂರು ದಕ್ಷಿಣ ಕನ್ನಡ: ರಾಜಕೀಯ ವಿಚಾರವಾಗಿ ನಡೆದ ಚರ್ಚೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೋರ್ವ ಸೆಲೂನ್ ಮಾಲಕನಿಗೆ ಚೂರಿಯಿಂದ ಇರಿದ ಘಟನೆ ಮಂಗಳೂರು ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ನಡೆದಿದೆ.
ಬೋಳಾರದ ಕಾಂತಿ ಹೇರ್ ಡ್ರೆಸ್ಸಸ್ ನ ಮಾಲಕ ಎಡ್ವಿನ್ ವಿನಯ್ ಕುಮಾರ್ (೬೫) ಚೂರಿ ಇರಿತಕ್ಕೆ ಒಳಗಾದವರು. ಸ್ಥಳೀಯ ನಿವಾಸಿ ಆನಂದ ಸಫಲ್ಯ(೫೫) ಆರೋಪಿ.

ಕೇರಳ ಮೂಲದ ಅಡ್ವಿನ್ ವಿನಯ್ ಕುಮಾರ್ ಬೋಳಾರದಲ್ಲಿ ಸೆಲೂನ್ ನಡೆಸುತ್ತಿದ್ದಾರೆ. ಎಡ್ವಿನ್ ಮತ್ತು ಆನಂದ ಸಫಲ್ಯ ನಡುವೆ ರಾಜಕೀಯ ವಿಚಾರಕ್ಕೆ ಸಂಬಂಧಿಸಿ ತೀವ್ರ ಚರ್ಚೆ, ವಾಗ್ವಾದ ನಡೆದಿತ್ತೆನ್ನಲಾಗಿದೆ. ಈ ಮಾತುಕತೆ ವಿಕೋಪಕ್ಕೆ ತಿರುಗಿದ್ದು, ಮದ್ಯ ಸೇವಿಸಿದ ಅಮಲಿನಲ್ಲಿದ್ದ ಆರೋಪಿ ಆನಂದ ಸಫಲ್ಯ ಸಮೀಪದಲ್ಲೇ ಇರುವ ತನ್ನ ಮನೆಯಿಂದ ಚೂರಿ ತಂದು ಎಡ್ವಿನ್ ಅವರ ಎದೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.