ಮಂಡ್ಯ: ಚುನಾವಣೆಯ ಸಂದರ್ಭ ಇದೆ. ಎರಡು ವಿಚಾರದಲ್ಲಿ ಚುನಾವಣೆ ನಡೀತಿದೆ. ಸಂವಿಧಾನದ ಆಶಯದಡಿ ಇಂಡಿಯಾ ಘಟ್ ಬಂಧನ್. ಸಂವಿಧಾನದ ಆಶಯ ನಾಶ ಮಾಡುವುದು ಮತ್ತೊಂದು. ಅವರು ಕೆಲವರ ಪರ ಸರ್ಕಾರ ನಡೆಸ್ತಿದ್ದಾರೆ. ನಾವು ಸರ್ವರ ಹಿತಕ್ಕಾಗಿ ಚುನಾವಣೆ ನಡೆಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಮಂಡ್ಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನ ಘೋಷಿಸಿದ್ದೆವು. ಅವೆಲ್ಲವನ್ನೂ ಜಾರಿಗೊಳಿಸಿದ ಸಂತಸ ನಮ್ಮಲ್ಲಿದೆ. ಗೃಹಲಕ್ಷ್ಮೀ ಯೋಜನೆಯಿಂದ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ಪ್ರತಿ ವರ್ಷ 24 ಸಾವಿರ ಬ್ಯಾಂಕಿಗೆ ಹಾಕುವ ಮೂಲಕ ನೆಮ್ಮದಿ ಜೀವನ ಕಲ್ಪಿಸುತ್ತಿದ್ದೇವೆ. ಗೃಹ ಜ್ಯೋತಿ, ಅಕ್ಕಿಭಾಗ್ಯ, ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯದ ಉದ್ದಕ್ಕೂ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಯೋಜನೆ ಮಂಜೂರು ಮಾಡಲಾಗಿದೆ.
ಈ ಚುನಾವಣೆಯಲ್ಲೂ ಎಐಸಿಸಿಯಿಂದ ಐದು ಗ್ಯಾರಂಟಿಗಳ ಘೋಷಣೆ. ರಾಷ್ಟ್ರ ವ್ಯಾಪ್ತಿಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಯಾರ ಬಳಿಯೂ ಕೈ ಚಾಚಲ್ಲ. ಅವರಿಗೆ ನ್ಯಾಯ ಕೊಡಿಸಬೇಕಿದೆ. ಅದಕ್ಕಾಗಿ ನಮ್ಮ ಹೋರಾಟ. ಭಾರತ್ ಜೋಡೋ ಯಾತ್ರೆಯುದ್ದಕ್ಕೂ ರೈತರ ಸಂಕಷ್ಟ ಆಲಿಸಿದ್ದೇನೆ. ಪಾದಯಾತ್ರೆಯುದ್ದಕ್ಕೂ ರೈತರು ನನ್ನ ಬಳಿ ಕೆಲವೊಂದು ವಿಚಾರ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.
ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಕ್ತಿಲ್ಲ. ರೈತರ ಸಾಲಮನ್ನಾ ಆಗ್ತಿಲ್ಲ. ಶ್ರೀಮಂತರ ಸಾಲಮನ್ನಾ ಆಗುತ್ತೆ. ರೈತರ ಸಾಲಮನ್ನಾ ಮಾಡಲು ಯಾಕೆ ಮೀನಾಮೇಷ ಎಂದು ಕೇಳ್ತಾರೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ನಿಮ್ಮ ಸಮಸ್ಯೆ ಪರಿಹಾರಕ್ಕೆ ಸೂತ್ರ ರಚನೆ. ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತೇವೆ. ಮೋದಿ ಸ್ನೇಹಕೂಟದ ಸಾಲ ಮನ್ನಾ ಮಾಡಿದಂತೆ ರಾಷ್ಟ್ರದ ಎಲ್ಲಾ ರೈತರ ಸಾಲಮನ್ನಾ ಮಾಡುತ್ತೇವೆ. 30 ದಿನದೊಳಗಾಗಿ ರೈತರ ಬಾಕಿ ಪಾವತಿ. ಕರ್ನಾಟಕ ಸರ್ಕಾರದಂತೆ ರಾಷ್ಟ್ರದಲ್ಲೂ ಗೃಹಲಕ್ಷ್ಮೀ ಯೋಜನೆ. ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ನೀಡುವುದಾಗಿ ಘೋಷಿಸಿದರು.
ನಮ್ಮ ಸರ್ಕಾರ ಬಂದ್ರೆ ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದ 1 ಲಕ್ಷ ನೆರವು. ಪ್ರತಿ ತಿಂಗಳು ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯದಿಂದ ಹತ್ತು ಸಾವಿರ ನೆರವು. ಮಹಿಳೆಯರಿಗೆ ಒಂದು ಲಕ್ಷದ ಜೊತೆಗೆ ನಿರುದ್ಯೋಗಿ ಯುವಕರಿಗೂ ಕಾರ್ಯಕ್ರಮ. ನಿಮ್ಮ ಕನಸು ನನಸು ಮಾಡುವ ಯೋಜನೆಗೆ ನಿರ್ಧಾರ. ಪದವಿ ಮುಗಿಸಿದವರಿಗೆ ಉದ್ಯೋಗದ ಭರವಸೆ ನೀಡುವುದಾಗಿ ತಿಳಿಸಿದರು.
ರಾಹುಲ್ ಗಾಂಧಿ ಭಾಷಣವನ್ನು ಕನ್ನಡಕ್ಕೆ ತನ್ವೀರ್ ಸೇಠ್ ಅನುವಾದ ಮಾಡಿದರು.