ಚನ್ನಪಟ್ಟಣ: ನಾಡಿನ ಅಸ್ಮಿತೆಯ ಉಳಿವಿಗೆ ಹೋರಾಟ ಮಾಡುವ ಕನ್ನಡಪರ ಸಂಘಟನೆಗಳ ಮೇಲಿನ ಎಲ್ಲಾ ಮೊಕ್ಕದ್ದಮೆಗಳನ್ನು ಸರ್ಕಾರ ರದ್ದು ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಒತ್ತಾಯಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಬುಧವಾರ ನಡೆದ ೧೯೬ ನೇ ದಿನದ ಹೋರಾಟದಲ್ಲಿ ಮಾತನಾಡಿದ ಅವರು ಕನ್ನಡ ಅಸ್ಮಿತೆ ಉಳಿಸಲು ಹಾಗೂ ನಾಡಿನ ಜನತೆಯ ಮೇಲಿನ ಅನ್ಯಾಯ ಖಂಡಿಸಿ ಕನ್ನಡಪರ, ರೈತಸಂಘಟನೆಗಳು ಮಾಡಿರುವ ಹೋರಾಟಗಾರರ ಮೇಲೆ ಸರ್ಕಾರಗಳು ಹಾಕಿರುವ ಕೇಸ್‌ಗಳಿಗೆ ಹತ್ತಾರು ವರ್ಷಗಳಾದರೂ ಮುಕ್ತಿ ಸಿಕ್ಕಿಲ್ಲ.
ಆದರೆ ರಾಜಕಾರಣಿಗಳು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ತಮ್ಮ ಮೇಲಿನ ಮೊಕದ್ದಮೆಗಳನ್ನು ರದ್ದು ಮಾಡಿಕೊಳ್ಳುತ್ತಾರೆ. ಇದಕ್ಕೆ ಮೇಕೆದಾಟು ಯೋಜನೆಯಲ್ಲಿ ಕೋವಿಡ್ ನಿಯಮ ಉಲ್ಲಂಘಟನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸರ್ಕಾರ ದಾಖಲಿಸಿದ್ದ ಮೊಕದ್ದಮೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ರದ್ದು ಮಾಡಿರುವುದು ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ತಾರತಮ್ಯ ಬಿಟ್ಟು ಎಲ್ಲಾ ಕನ್ನಡಪರ ಸಂಘಟನೆಗಳ ಮೇಲಿನ ಮೊಕದ್ದಮೆಗಳನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಚುನಾವಣಾ ರಾಜಕೀಯದ ಒತ್ತಡದ ನಡುವೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿನ ಸಮಸ್ಯೆಗಳ ಬಗ್ಗೆಯೂ ಗಮನ ನೀಡಬೇಕಿದೆ. ಬಿಸಿಲಿನ ತಾಪದಿಂದ ಕೆರೆಕಟ್ಟಗಳಲ್ಲಿನ ನೀರು ಸಂಪೂರ್ಣ ಖಾಲಿಯಾಗಿದ್ದು, ಪ್ರಾಣಿ, ಪಕ್ಷಿಗಳು ಸಾವನ್ನಪ್ಪುತ್ತಿವೆ. ಕೈಗಾರಿಕೆಗಳು ಸ್ಥಗಿತವಾಗಿವೆ. ಎಳನೀರು ಹಾಗೂ ರೇಷ್ಮೆಗೂಡಿನ ಇಳುವರಿ ಕಡಿಮೆಯಾಗಿದ್ದು ಈ ಎಲ್ಲಾ ವರದಿಗಳನ್ನು ಪ್ರಾಧಿಕಾರ ಮತ್ತು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಲು ಇಲಾಖೆ ಅಧಿಕಾರಿಗಳು ಹಾಗೂ ವಕೀಲರು ಮುಂದಾಗಬೇಕು ಎಂದು ರಮೇಶ್‌ಗೌಡ ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಬಿಸಿಲಿನ ತಾಪ ಹೆಚ್ಚಾಗಿದ್ದು ಪ್ರಾಣಿ ಪಕ್ಷಿಗಳಿಗೆ ನೀರುಣಿಸಲು ಮನೆಗಳ ಮೇಲೆ ನೀರನ್ನು ಇಡಬೇಕು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ನೀರನ್ನು ಇಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ರಂಜಿತ್‌ಗೌಡ, ಬೆಳಕು ಶ್ರೀಧರ್, ರಾಮಕೃಷ್ಣಪ್ಪ, ಕುಮಾರ್, ಕೃಷ್ಣೇಗೌಡ, ಶ್ಯಾಮ್, ಮೈ.ಹಳ್ಳಿ, ದೊಡ್ದೇಗೌಡ, ಚಿಕ್ಕಣಪ್ಪ, ಡಿಎಸ್‌ಎಸ್ ವೆಂಕಟೇಶ್, ರಾಜು, ಉಮೇಶ್, ಸಿದ್ದಪ್ಪಾಜಿ, ಆರ್. ಶಂಕರ್ ಇತರರು ಇದ್ದರು.