Tuesday, April 22, 2025
Google search engine

Homeರಾಜ್ಯಸುದ್ದಿಜಾಲಏ. 23ರಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ,ಅಗತ್ಯ ಪೂರ್ವಸಿದ್ದತೆ ಕೈಗೊಳ್ಳಿ: ಶಿಲ್ಪಾ ನಾಗ್

ಏ. 23ರಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ,ಅಗತ್ಯ ಪೂರ್ವಸಿದ್ದತೆ ಕೈಗೊಳ್ಳಿ: ಶಿಲ್ಪಾ ನಾಗ್

ಚಾಮರಾಜನಗರ: ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಇದೇ ತಿಂಗಳ ಏಪ್ರಿಲ್ 23ರಂದು ನಡೆಯಲಿದ್ದು, ಈ ಸಂಬಂಧ ಅಗತ್ಯ ಪೂರ್ವ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಶ್ರೀ ಬಿಳಿಗಿರಿರಂಗನಾಥ ಸ್ವಾಮಿಯವರ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಸಿದ್ದತಾ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಥೋತ್ಸವ ಅಂಗವಾಗಿ ದೇವಾಲಯದ ಆವರಣ, ರಥದ ಬೀದಿ, ಕಲ್ಯಾಣಿ ಕೊಳದ ಬಳಿ, ಕಮರಿ ಅವರಣ ಹಾಗೂ ದಾಸೋಹ ಆವರಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮತ್ತಿತ್ತರ ಜನನಿಬಿಡ ಸ್ಥಳಗಳಲ್ಲಿ ವಹಿಸಲಾಗುವ ಬಂದೋಬಸ್ತ್ ಕ್ರಮಗಳು ಸಮರ್ಪಕವಾಗಿರಬೇಕು. ರಥೋತ್ಸವ ಸಿದ್ದತೆಗಳ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಾರ್ಕಿಂಗ್ ಸ್ಥಳ ಸೇರಿದಂತೆ ಇತರೆಡೆ ರಾಜಕೀಯ ಪ್ರೇರಿತವಾದ ಯಾವುದೇ ಬ್ಯಾನರ್, ಭಿತ್ತಿಪತ್ರಗಳ ಅಳವಡಿಕೆಗೆ ಅವಕಾಶ ನೀಡಬಾರದು. ಪ್ರವಾಸಿ ಮಂದಿರದಲ್ಲಿಯೂ ಸಹ ಯಾವುದೇ ರಾಜಕೀಯ ವ್ಯಕ್ತ್ತಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ರಥೋತ್ಸವ ಸಂದರ್ಭದಲ್ಲಿ ಭಕ್ತಾಧಿಗಳಿಗೆ ವಿತರಿಸುವ ಪಾನಕ, ಪ್ರಸಾದ ಹಂಚಿಕೆ ಹಾಗೂ ಅರವಟ್ಟಿಗೆ ವಿತರಣೆಗೆ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಂದ ಲಿಖಿತ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ, (ಮೊ. ಸಂಖ್ಯೆ: 8884504666) ಕೊಳ್ಳೇಗಾಲ ಮತ್ತು ಇ-ಮೇಲ್ ackollegala@gmail.com ಇವರನ್ನು ಸಂಪರ್ಕಿಸಬಹುದು ಎಂದರು.

ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಏಪ್ರಿಲ್ 21ರಿಂದ 25ರವರೆಗೆ ಭಕ್ತಾಧಿಗಳು ಕ್ಷೇತ್ರಕ್ಕೆ ಹೋಗಿಬರಲು ಹೆಚ್ಚು ಸಂಖ್ಯೆಯಲ್ಲಿ ಕೆ.ಎಸ್.ಆರ್.ಟಿಸಿ ಬಸ್ಸುಗಳ ನಿಯೋಜನೆ ಮಾಡಬೇಕು. ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸ್ವಚ್ಚತಾ ಕಾರ್ಯಗಳಿಗೆ ವಿಶೇಷ ಗಮನ ಹರಿಸಬೇಕು. ಹಳ್ಳಗಳಿಂದ ಕೂಡಿದ ರಸ್ತೆಗಳನ್ನು ಗ್ರಾವೆಲ್ ತುಂಬಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಯಾವುದೇ ಪ್ಲಾಸ್ಟಿಕ್ ಉಪಯೋಗಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಪ್ರಸ್ತುತ ಬೇಸಿಗೆ ಬಿಸಿಲು ಅಧಿಕವಾಗಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಕುಡಿಯುವ ನೀರಿನ ಪರಿಶುದ್ಧತೆ ತಪಾಸಣೆ ಕೈಗೊಂಡು ಜಾತ್ರೆಗೆ ಒಂದು ದಿನ ಮೊದಲೆ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಬೇಕು. ಲಭ್ಯವಿರುವ ಬೋರ್‍ವೆಲ್‍ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಭಕ್ತಾಧಿಗಳಿಗೆ ವಿತರಿಸುವ ಮಜ್ಜಿಗೆ ಹಾಗೂ ಪಾನಕಕ್ಕೆ ಶುದ್ದ ನೀರು ಬಳಸುವಂತೆ ತಿಳಿಹೇಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ ಏಪ್ರಿಲ್ 21ರಿಂದ 25ರವರೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಸಿಬ್ಬಂದಿ ತುರ್ತು ವಾಹನ ನಿಯೋಜಿಸಬೇಕು. ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿರುವುದರಿಂದ ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಥೋತ್ಸವದಂದು ದ್ವಿಚಕ್ರ ವಾಹನವನ್ನು ಬಿಳಿಗಿರಿರಂಗನ ಬೆಟ್ಟಕ್ಕೆ ನಿಷೇಧಿಸಬೇಕು. ದ್ವಿಚಕ್ರ ವಾಹನ ಸವಾರರು ಅರಣ್ಯ ಇಲಾಖೆಯ ಚೆಕ್‍ಪೋಸ್ಟ್ ಬಳಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಅಲ್ಲಿಂದ ಕೆಎಸ್.ಆರ್. ಟಿಸಿ ಬಸ್ಸುಗಳಲ್ಲಿ ಬೆಟ್ಟಕ್ಕೆ ತೆರಳುವಂತೆ ತಿಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ನಿಸರ್ಗಪ್ರಿಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ವಲಯ ಅರಣ್ಯ ಅಧಿಕಾರಿ ನಾಗೇಂದ್ರ ನಾಯಕ್, ದೇವಾಲಯದ ಅರ್ಚಕರಾದ ರವಿಕುಮಾರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್, ಕೆ.ಎಸ್.ಆರ್.ಟಿಸಿ, ಅಗ್ನಿಶಾಮಕ ಇಲಾಖೆ ಆಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular