ಜಕಾರ್ತ : ಇಂಡೋನೇಶ್ಯಾದ ಉತ್ತರ ಸುಲಾವೆಸಿ ಪ್ರಾಂತದಲ್ಲಿನ ರುವಾಂಗ್ ಪರ್ವತದಲ್ಲಿ ಹಲವು ಜ್ವಾಲಾಮುಖಿ ಸ್ಫೋಟಗೊಂಡಿದ್ದು ಲಾವಾ ಮತ್ತು ಬಿಸಿ ಬೂದಿಯ ಮೋಡ ಆಕಾಶದೆತ್ತರಕ್ಕೆ ವ್ಯಾಪಿಸಿದೆ.
ಸಮೀಪದ ಕನಿಷ್ಠ ೮೦೦ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಾಂತೀಯ ರಾಜಧಾನಿ ಮನಾಡೋದ ಸುಮಾರು ೧೦೦ ಕಿ.ಮೀ ದೂರದ ರುವಾಂಗ್ ದ್ವೀಪದಲ್ಲಿರುವ ಪರ್ವತದಲ್ಲಿ ಮಂಗಳವಾರದಿಂದ ನಾಲ್ಕು ಬಾರಿ ಜ್ವಾಲಾಮುಖಿ ಸ್ಫೋಟಿಸಿದೆ. ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಹಾಗೂ ಆ ಬಳಿಕದ ಪಶ್ಚಾತ್ ಕಂಪನಗಳು ಜ್ವಾಲಾಮುಖಿ ಸ್ಫೋಟಿಸಲು ಕಾರಣವಾಗಿರಬಹುದು. ರುವಾಂಗ್ ಪರ್ವತದಿಂದ ಅಪಾಯಕಾರಿ ಬಿಸಿ ಬೂದಿಯ ಮೋಡಗಳು ಆಗಸದಲ್ಲಿ ೧.೮ ಕಿ.ಮೀ ಎತ್ತರಕ್ಕೆ ಚಿಮ್ಮಿದೆ. ಇನ್ನಷ್ಟು ಜ್ವಾಲಾಮುಖಿ ಸ್ಫೋಟಿಸುವ ಸಾಧ್ಯತೆಯಿರುವುದರಿಂದ ದ್ವೀಪದ ಜನರನ್ನು ಸ್ಥಳಾಂತರಿಸಬೇಕಿದೆ.
ಪರ್ವತದ ಕೇಂದ್ರಬಿಂದುವಿನಿಂದ ೪ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಯನ್ನು ನಿಷೇಧಿಸಲಾಗಿದೆ ಎಂದು ಇಂಡೋನೇಶ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ನಿರ್ವಹಣೆ ಕೇಂದ್ರದ ಅಧಿಕಾರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ರುವಾಂಗ್ ದ್ವೀಪದ ಸುಮಾರು ೮೩೮ ನಿವಾಸಿಗಳನ್ನು ಪಕ್ಕದ ತಗುಲಂಡ್ಯಾಂಗ್ ದ್ವೀಪಕ್ಕೆ ಸ್ಥಳಾಂತರಿಸಿರುವುದಾಗಿ ವರದಿಯಾಗಿದೆ.