ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕನಕಪುರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿರುವ ಐಟಿ ಇಲಾಖೆ ಅಧಿಕಾರಿಗಳು ನಮ್ಮ ಬೆಂಬಲಿಗರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಡಿ ಕೆ ಶಿವಕುಮಾರ್ ಅವರು ಬುಧವಾರ ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ಆಯೋಜಿಸಿದ್ದ ಪತ್ರಕರ್ತರ ಸಂವಾದದಲ್ಲಿ ಮಾತನಾಡಿ ಅವರು, ಐಟಿ ಅಧಿಕಾರಿಗಳು ನನ್ನ ಮತ್ತು ನನ್ನ ಬೆಂಬಲಿಗರ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎ ನಾಯಕರ ಮೇಲೇಕೆ ದಾಳಿ ನಡೆಸುತ್ತಿಲ್ಲ? ನಮಗೆ ಕಿರುಕುಳ ನೀಡಲು ಬಯಸುವ ಮೇಲಧಿಕಾರಿಗಳ ಸೂಚನೆಯಂತೆ ಐಟಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದರು.
ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಮತ್ತು ವ್ಯವಹಾರ ನಡೆಸುವವರಿಗೆ ಐಟಿ ಕಿರುಕುಳ ನೀಡುತ್ತಿದೆಯ . ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಐಟಿ ಮತ್ತು ಇಡಿ ಏಜೆನ್ಸಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು ನಮಗೆ ಹೊಸದಲ್ಲ ಎಂದು ಹೇಳಿದರು.
ಇದು ಬಿಜೆಪಿಯ ಅಸ್ತ್ರಗಳಲ್ಲಿ ಒಂದಾಗಿದೆ. ಅವರಿಗೆ ಸೋಲಿನ ಭಯವಿದೆ, ಅವರಿಗೆ ಐಟಿ, ಇಡಿ, ಸಿಬಿಐ ಬಿಟ್ಟರೆ ಬೇರೇನೂ ಗೊತ್ತಿಲ್ಲ, ಕಳೆದ 10 ವರ್ಷಗಳಲ್ಲಿ ಅವರ ಸಾಧನೆಗಳ ಬಗ್ಗೆ ಅವರ ಬಳಿಯೇ ಸರಿಯಾದ ಉತ್ತರವಿಲ್ಲ, ಕಾಂಗ್ರೆಸ್ ಬೆಂಬಲಿಗರನ್ನು ದುರ್ಬಲಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಅವರ ಈ ಯತ್ನ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.