ಮೈಸೂರು: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷವಾಗಿದ್ದು, ೫ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ೯ ತಿಂಗಳಲ್ಲಿಯೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್‌ನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಬುಧವಾರ ರಾತ್ರಿ ಮತಯಾಚಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೊಬ್ಬರದ ಬೆಲೆ ರೂ. ೫೦೦ ರಿಂದ ೧೭೦೦ಕ್ಕೆ ಹೆಚ್ಚಾಗಿದೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ೩೦ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಗೆ ಮಾರುತ್ತಿದ್ದಾರೆ. ಬಿಜೆಪಿ ಶ್ರೀಮಂತರ ಪರ, ಬಂಡವಾಳಗಾರರ ಪರ ಇರುವ ಸರ್ಕಾರವಾಗಿದ್ದು, ಬಡವರ ವಿರೋಧಿ ಸರ್ಕಾರವಾಗಿದೆ. ಬಿಜೆಪಿ ಯಾವತ್ತೂ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ವಚನಭ್ರಷ್ಟ ಪಕ್ಷವಾಗಿದೆ. ಆದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಮತದಾನ ಮಾಡಿ. ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯರವರಿಗೆ ಮರುಜನ್ಮ ನೀಡಿದ ಕ್ಷೇತ್ರವಾಗಿದ್ದು ಚುನಾವಣೆ ಮುಗಿದ ಮೇಲೆ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುತ್ತೇವೆ ಎಂದ ಅವರು ಎಲ್ಲರೂ ಒಗ್ಗಟ್ಟಾಗಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಎಂ. ಲಕ್ಷ್ಮಣ್‌ರವರ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಮಾತನಾಡಿ ಸಿದ್ದರಾಮಯ್ಯರವರು ಹಿನಕಲ್ ಗ್ರಾಮಕ್ಕೆ ಒಳಚರಂಡಿ ವ್ಯವಸ್ಥೆ ಮಾಡಿದ್ದಾರೆ. ಅರ್ಧ ಊರಿಗೆ ಕಾವೇರಿ ನೀರು ಕೊಟ್ಟಿದ್ದಾರೆ, ಸ್ಮಶಾನದ ಅಭಿವೃದ್ಧಿಯನ್ನು ಮಾಡಿಕೊಡುತ್ತಾರೆ. ಚುನಾವಣೆ ಮುಗಿದ ಮೇಲೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಂದಲೇ ಗುದ್ದಲಿ ಪೂಜೆ ಮಾಡಿಸಲಾಗುವುದು. ಹಿನಕಲ್ ಗ್ರಾಮದ ಎಲ್ಲಾ ಕೆಲಸಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾಡಿಸಿ ಕೊಡುವುದಾಗಿ ತಿಳಿಸಿದ ಅವರು ಎಲ್ಲಾ ಮುಖಂಡರು ನಿಮ್ಮ ನಿಮ್ಮ ಬೂತ್‌ಗಳಲ್ಲಿ ಮನೆ ಮನೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ ಮತ ಕೇಳುವ ಮುಖಾಂತರ ಎಂ. ಲಕ್ಷ್ಮಣ್‌ರವರನ್ನು ಗೆಲ್ಲಿಸಬೇಕೆಂದು ಎಂದರು.
ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಕೂರ್ಗಳ್ಳಿ ಮಹಾದೇವ, ಬೀರಿಹುಂಡಿ ಬಸವಣ್ಣ, ಅರುಣ್‌ಕುಮಾರ್, ಜವರಪ್ಪ, ಮಾದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಬಿ. ರವಿ, ಕೆಪಿಸಿಸಿ ಕಾರ್ಯದರ್ಶಿ ನಾಗವಾಲ ನರೇಂದ್ರ, ಮುಖಂಡರಾದ ಹೊನ್ನಪ್ಪ, ಸಂದೇಶ ದೇವಣ್ಣ, ಹಿನಕಲ್ ಪ್ರಕಾಶ್, ಉದಯ್ ಶ್ರೀನಿವಾಸ್, ಕೆ.ಜಿ. ನಾಗರಾಜ್, ಪೈ. ಕುಮಾರ್, ಚಂದ್ರಶೇಖರ್, ದೇವರಾಜ್, ರಮೇಶ್ ಹೊಟ್ಟೇಗೌಡ, ಕೆ.ಎಸ್. ಕರೀಗೌಡ, ಸಿ.ಎಂ. ಸಿದ್ದರಾಮೇಗೌಡ, ದೊಡ್ಡೇಗೌಡ, ಫರ್ಜಾನ್, ರಾಜಣ್ಣ, ಡಾ. ಪ್ರಕಾಶ್, ನಂಜುಂಡ, ದಡದಹಳ್ಳಿ ಮಹಾದೇವ, ನುಗ್ಗಳ್ಳಿ ಚಿಕ್ಕಣ, ಮಂಜು ಹಾಜರಿದ್ದರು.