ಮಂಗಳೂರು(ದಕ್ಷಿಣ ಕನ್ನಡ): ಪ್ರಧಾನಿ ಮೋದಿಯವರು ರೋಡ್ ಶೋ ವೇಳೆ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಸಂದರ್ಭ ಸ್ಥಳೀಯ ಬಿಲ್ಲವ ಸಂಘಟನೆಯ ಮುಖಂಡರನ್ನು ಕರೆದಿಲ್ಲ ಎಂದು ಎಂದು ಬಿರುವೆರ್ ಕುಡ್ಲ ಸಂಘದ ಅಧ್ಯಕ್ಷ ಉದಯ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಿದ ವೇಳೆ ನಾರಾಯಣ ಗುರು ವೃತ್ತಕ್ಕಾಗಿ ಹೋರಾಟ ನಡೆಸಿದ ಬಿಲ್ಲವ ಸಂಘಟನೆಗಳನ್ನು ಬಿಜೆಪಿಯವರು ಕರೆದಿಲ್ಲ ಎಂದ ಅವರು ಕನಿಷ್ಠ ಪಕ್ಷ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಸಾಯಿರಾಂ ಅವರನ್ನಾದರೂ ಕರೆಯಬಹುದಿತ್ತು ಎಂದರು.
ಆದರೆ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಉದ್ಯಮಿಗಳು ಮಾತ್ರ ಕರೆದುಕೊಂಡು ಹೋಗಿದ್ದರು, ಅಲ್ಲದೆ ಬಿಜೆಪಿಯ ಪಕ್ಷ ವಿರೋಧ ಕೆಲಸ ಮಾಡಿದವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ಬಿಲ್ಲವ ಸಂಘಟನೆಗಳನ್ನು ಕರೆದುಕೊಂಡು ಹೋಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪುಲ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಉದಯ್ ಪೂಜಾರಿ ನಾರಾಯಣಗುರು ಸರ್ಕಲ್ ಹೋರಾಟ ಮಾಡುವಾಗ ಸತೀಶ್ ಕುಂಪಲ ಎಲ್ಲಿ ಇದ್ದರು. ಅವರು ಈಗ ಪ್ರಚಾರಕ್ಕಾಗಿ ಬಂದಿದ್ದಾರೆ. ಬಿಲ್ಲವ ಎಂದು ಅವರನ್ನು ಜಿಲ್ಲಾಧ್ಯಕ್ಷ ಮಾಡಿದ್ದು, ಬಿಲ್ಲವ ಸಂಘಟನೆಗಾಗಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.