ಗುಂಡ್ಲುಪೇಟೆ: ಹೈನುಗಾರಿಕೆಯಿಂದ ರೈತರಿಗೆ ಅನುಕೂಲವಾಗುವ ಜೊತೆಗೆ ಸಹಕಾರ ಕ್ಷೇತ್ರದ ಬೆಳವಣಿಗೆಗೂ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ತಿಳಿಸಿದರು.
ಪಟ್ಟಣದಲ್ಲಿ ಚಾಮುಲ್ ಉಪ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು, ಅಕಾಲಿಕ ಮರಣಕ್ಕೀಡಾದ ತಾಲೂಕಿನ ಹಾಲು ಉತ್ಪಾದಕರ ವಾರಸುದಾರರಿಗೆ ಚಾಮುಲ್ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಚೆಕ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ಗಡಿ ತಾಲೂಕಾದ ಗುಂಡ್ಲುಪೇಟೆಯಲ್ಲಿ ಹೈನುಗಾರಿಕೆ ರೈತಾಪಿ ವರ್ಗದ ಜನರ ಜೀವನಾಡಿಯಾಗಿದೆ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆ ಸರ್ವಕಾಲಕ್ಕೂ ತಾಲೂಕಿನಲ್ಲಿ ಉತ್ತಮವಾಗಿ ನಡೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಒಕ್ಕೂಟದಿಂದ ಸಿಗುವ ಎಲ್ಲಾ ಸಲವತ್ತುಗಳನ್ನು ಉತ್ಪಾದಕರಿಗೆ ಮತ್ತು ಕುಟುಂಬಸ್ಥರಿಗೆ ನೀಡಲಾಗುತ್ತಿದೆ. ಇಂದು ತಾಲೂಕಿನ 35 ಉತ್ಪಾದಕರ ವಾರಸುದಾರರಿಗೆ ತಲಾ 15 ಸಾವಿರ ರೂ. ಗಳ ಆರ್ಥಿಕ ನೆರವು ನೀಡಲಾಗಿದೆ. ಆದ್ದರಿಂದ ಮೃತರ ವಾರಸುದಾರರು ಹೈನುಗಾರಿಕೆಯನ್ನು ಕೈಬಿಡಬಾರದು ಎಂದು ಮನವಿ ಮಾಡಿದರು.
ಸಹಾಯಕ ವ್ಯವಸ್ಥಾಪಕ ಜಿ.ಪ್ರಕಾಶ್, ವಿಸ್ತರಣಾಧಿಕಾರಿಗಳಾದ ಎಚ್.ಪ್ರಕಾಶ್, ಸಿದ್ದಲಿಂಗೇಶ್, ರಂಜಿತ, ಮಾದೇಶ್, ಉದಯಕುಮಾರ್, ಮುತ್ತಪ್ಪ, ಮುಖ್ಯ ಕಾರ್ಯನಿರ್ವಾಹಕರಾದ ಮಹೇಂದ್ರ, ನಾಗೇಶ್ ಹಾಜರಿದ್ದರು.