ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸಂರಕ್ಷಿಸುವ ಹೋರಾಟ ಇಂದಿನಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ನನ್ನ ಪ್ರೀತಿಯ ನಾಗರಿಕರೆ, ೨೧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇಂದಿನಿಂದ ಮೊದಲ ಹಂತದ ಲೋಕಸಭಾ ಚುನಾವಣೆಗಳು ಆರಂಭಗೊಳ್ಳಲಿದ್ದು, ಎಚ್ಚರಿಕೆಯಿಂದ ಮತ ಚಲಾಯಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ಭವಿಷ್ಯದ ನ್ಯಾಯ ನಿಮಗಾಗಿ ಕಾಯುತ್ತಿದೆ. ಆರ್ಥಿಕ ಸಬಲೀಕರಣ ಹಾಗೂ ಸಮಾನ ಅವಕಾಶದ ಹೊಸ ಯುಗವು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ ಎಂದು ಖರ್ಗೆ ಹೇಳಿದರು.
೧೦ ವರ್ಷಗಳ ದಾಖಲೆ ನಿರುದ್ಯೋಗದ ಮುಂದುವರಿಕೆಯ ಬದಲಿಗೆ ನೀವು ಉದ್ಯೋಗ ಕ್ರಾಂತಿಯ ಯುವ ನ್ಯಾಯಕ್ಕಾಗಿ, ಮಹಿಳೆಯರಿಗೆ ಆರ್ಥಿಕ ಸಬಲತೆ ಒದಗಿಸುವ ನಾರಿ ನ್ಯಾಯ, ಎಂಎಸ್‌ಪಿ ಒದಗಿಸುವ ರೈತರ ಏಳಿಗೆಯ ಕಿಸಾನ್ ನ್ಯಾಯ, ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವ ಶ್ರಮಿಕ ನ್ಯಾಯದ ಪರವಾಗಿ ನೀವು ಮತ ಚಲಾಯಿಸುತ್ತೀರಿ ಎಂದು ನನಗೆ ಖಚಿತವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಭಾರತದ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ನಿಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ಹೇಳಿರುವ ಖರ್ಗೆ ಮೊದಲ ಬಾರಿ ಮತದಾನ ಮಾಡುತ್ತಿರುವವರಿಗೆ ಸ್ವಾಗತ ಕೋರಿದ್ದಾರೆ.