ಮಂಗಳೂರು(ದಕ್ಷಿಣ ಕನ್ನಡ): ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಬ್ರೇಕ್ ಫೇಲ್ ಆಗಿ ಪೇಟೆಬದಿಯ ಅಂಗಡಿಗಳು ಮತ್ತು ವಾಹನಗಳಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಪೇಟೆಯಲ್ಲಿ ನಡೆದಿದೆ.
ಘಟನೆಯಿಂದ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ, ಗೂಡ್ಸ್ ವಾಹನ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ರಸ್ತೆಯಲ್ಲಿದ್ದ ಖಾಸಗಿ ಬಸ್, ಟ್ಯಾಂಕರ್, ಗೂಡ್ಸ್ ಟೆಂಪೋ, ಕಾರು ಮತ್ತು ರಸ್ತೆಯ ಇಕ್ಕೆಲದಲ್ಲಿ ನಿಲ್ಲಿಸಲಾಗಿದ್ದ ಮೂರು ಬೈಕ್ ಗಳು ಸಂಪೂರ್ಣ ಜಖಂಗೊಂಡಿವೆ. ಲಾರಿ ವಾಹನಗಳಿಗೆ ಡಿಕ್ಕಿಹೊಡೆದು ಬಳಿಕ ಹೆದ್ದಾರಿಯ ಪಕ್ಕದ ಮೂರು ಅಂಗಡಿ ಮುಂಗಟ್ಟುಗಳು, ಎಟಿಎಮ್ ಗೆ ಢಿಕ್ಕಿ ಹೊಡೆದಿದ್ದು ಕಟ್ಟಡಗಳಿಗೆ ಹಾನಿ ಸಂಭವಿಸಿದೆ.
ಈ ಘಟನೆಯಿಂದಾಗಿ ಮೂಡಬಿದಿರೆ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.