ಯಳಂದೂರು: ಹೊಂಗನೂರು, ಸಂತೆಮರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಸುನೀಲ್ ಬೋಸ್ ರೋಡ್ ಷೋ ನಡೆಸಿದರು. ಇವರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಜಿ ಶಾಸಕರಾದ ಎಸ್. ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ ಸೇರಿದಂತೆ ಪ್ರಮುಖರು ಸಾಥ್ ನೀಡಿದರು.
ರಾತ್ರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುನೀಲ್ ಬೋಸ್ ಮಾತನಾಡಿ ಯುಪಿಎ ಸರ್ಕಾರ ಇದ್ದಾಗ ಬಡವರು, ಕೂಲಿ ಕಾರ್ಮಿಕರು, ರೈತರ ಪರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ರೈತರ, ವಿವಿಧ ನಿಗಮ, ಮಂಡಲಿಗಳಲ್ಲಿ ಸಾಲ ಮನ್ನ ಮಾಡಲಾಗಿತ್ತು. ಅನೇಕ ಭಾಗ್ಯ ಯೋಜನೆಗಳನ್ನು ತರಲಾಗಿತ್ತು. ಈಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ಬಡವರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಈ ಚುನಾವಣೆಯಲ್ಲೂ ವಿವಿಧ ಯೋಜನೆಗಳ ಗ್ಯಾರಂಟಿ ಕಾರ್ಡನ್ನು ಮನೆಮನೆಗಳಿಗೆ ತಲುಪಿಸಲಾಗುತ್ತಿದ್ದು ಈ ಬಾರಿ ಪಕ್ಷವನ್ನು ಬೆಂಬಲಿಸಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಜಿ ಶಾಸಕರಾದ ಎಸ್. ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ಕಿನಕಹಳ್ಳಿ ರಾಚಯ್ಯ ಡಿ.ಎನ್. ನಟರಾಜು, ವಡಗೆರೆದಾಸ್, ಮಹದೇವಯ್ಯ, ವೈ.ಕೆ.ಮೋಳೆ ನಾಗರಾಜು, ಮದ್ದೂರು ಶಿವಪ್ರಸಾದ್ ಸೇರಿದಂತೆ ಅನೇಕರು ಇದ್ದರು.