ಮೈಸೂರು: ದೇಶದ ಸಂವಿಧಾನದ ಉಳಿವಿಗಾಗಿ ಹಾಗೂ ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಆಯ್ಕೆ ಮಾಡಬೇಕೆಂದು ಇಲವಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಕೆ. ಬಸವಣ್ಣ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಗೋಪಾಲಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮನೆಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ ಮತಯಾಚಿಸಿ ಮಾತನಾಡಿದ ಅವರು ಬಿ.ಜೆ.ಪಿ. ಪಕ್ಷ ಜಾತಿಯ ಮೇಲೆ, ಧರ್ಮದ ಮೇಲೆ, ಭಾವನಾತ್ಮಕ ವಿಷಯಗಳ ಮೇಲೆ ಮತ ಕೇಳುತ್ತಿದೆಯೇ ವಿನಃ ಯಾವುದೇ ಅಭಿವೃದ್ಧಿ ವಿಷಯಗಳ ಮೇಲೆ ಭರವಸೆಗಳ ಮೇಲೆ ಮತ ಕೇಳುತ್ತಿಲ್ಲ. ಮೋದಿ ಮುಖನೋಡಿ ಮತ ಹಾಕಿ ಎನ್ನುತ್ತಾರೆ, ಮೋದಿ ಮುಖ ನೋಡಿದರೆ ಬಡವರ ಹೊಟ್ಟೆ ತುಂಬುತ್ತದೆಯೇ? ಮೈಸೂರನ್ನು ಪ್ಯಾರೀಸ್ ಮಾಡುತ್ತೇನೆಂದು ಮೋದಿ ಹೇಳಿದ್ದರು, ಮಾಡಿದ್ದರಾ? ಮೈಸೂರು ಜಿಲ್ಲೆಗೆ ಮೋದಿ ಕೊಡುಗೆ ಏನು? ಜನ ಬಿ.ಜೆ.ಪಿ. ಏಕೆ ಮತ ನೀಡಬೇಕು ಎಂದು ವಿಚಾರ ಮಾಡಬೇಕು. ಮೈಸೂರಿಗೆ ಸಿದ್ದರಾಮಯ್ಯರವರ ಕೊಡುಗೆ ಅಪಾರವಾಗಿದೆ. ಜಯದೇವ ಆಸ್ಪತ್ರೆ, ಟ್ರಾಮ ಸೆಂಟರ್, ಕಾಂಕ್ರಿಟ್ ರಸ್ತೆಗಳು, ಕುಡಿಯುವ ನೀರು, ಮಹಾರಾಣಿ ಕಾಲೇಜು ಹೀಗೆ ನೂರಾರು ಅಭಿವೃದ್ಧಿ ಕೆಲಸ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ರಾಜೇಗೌಡ, ಕೃಷ್ಣಮೂರ್ತಿ, ಮಹೇಶ, ರವಿಕುಮಾರ್, ಬಸವರಾಜು, ರವಿಶಂಕರ್, ಕರೀಗೌಡ, ನಾಗರಾಜು, ಕೆಂಪೇಗೌಡ, ಪಾಪೇಗೌಡ, ಮಹೇಶ್, ರಾಜೇಶ್, ಪಾಪ, ದಡದಳ್ಳಿ ಮಹಾದೇವ್, ನಿಂಗರಾಜು, ನಂಜಯ್ಯ, ಹನುಮಂತು, ಮಹಿಳೆಯರು, ಗ್ರಾಮಸ್ಥರು ಹಾಜರಿದ್ದರು.