ಬೆಂಗಳೂರು: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ ೨೬ರಂದು ಶುಕ್ರವಾರ ನಡೆಯಲಿದೆ. ಆ ದಿನ ಮತದಾನ ಮಾಡಿ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ತೋರಿಸಿದವರಿಗೆ ಉಚಿತವಚವಾಗಿ ಆಹಾರ ನೀಡಲು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‌ನ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ವಿಚಾರವಾಗಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಕೆಲವು ಹೋಟೆಲ್‌ಗಳು ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆಯೂ ಇದೇ ರೀತಿಯ ಪ್ರಯತ್ನ ಮಾಡಿದ್ದವು.
ಹೋಟೆಲ್‌ಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಧ್ಯಂತರ ಆದೇಶ ನೀಡಿದ್ದಾರೆ. ಅರ್ಜಿದಾರರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಬಾರದು ಎಂಬ ಷರತ್ತಿನೊಂದಿಗೆ, ಅರ್ಜಿದಾರರ ಸಂಘ ಮತ್ತು ಅದರ ಸದಸ್ಯರು ೨೦೨೪ ರ ಏಪ್ರಿಲ್ ೨೬, ರಂದು ಬೆಂಗಳೂರಿನಲ್ಲಿ ಮತದಾರರಿಗೆ ಉಚಿತ ಆಹಾರವನ್ನು ವಿತರಿಸಲು ಅನುಮತಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿದ್ದು ಈ ಕೆಲಸ ಮಾಡುತ್ತಿಲ್ಲ. ಮತ ಚಲಾಯಿಸಿದವರಿಗೆ ಮಾತ್ರ ಈ ರೀತಿಯ ಉಚಿತ ಆಹಾರ ನೀಡಲಾಗುತ್ತದೆ ಎಂದು ಅರ್ಜಿದಾರರು ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ಉಲ್ಲೇಖಿಸಿದ್ದರು.
ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಹೀಗಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮಾತ್ರ ಈ ವಿಧಾನವನ್ನು ಅನುಸರಿಸುತ್ತಿದ್ದೇವೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯ ವೇಳೆ ಉಚಿತ ಆಹಾರ ನೀಡಲಾಗಿತ್ತು. ಆಗಲೂ ನಮ್ಮ ವಿರುದ್ಧ ಯಾವುದೇ ನಿಯಮ ಉಲ್ಲಂಘನೆಯ ದೂರುಗಳು ದಾಖಲಾಗಿಲ್ಲ ಎಂದು ಅರ್ಜಿದಾರರು ಕೋರ್ಟ್‌ಗೆ ತಿಳಿಸಿದ್ದರು.