ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಇವಿಎಂ ಮತ್ತು ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿದೆ. ಇದೂಗ ತೀರ್ಪನ್ನು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ವೇಳೆ ನಡೆದ ವಾದ ಪ್ರತಿವಾದದ ವೇಳೆ ನ್ಯಾಯಪೀಠದ ಜಡ್ಜ್‌ಗಳು ಕೆಲವಿಷ್ಟು ಮಹತ್ವದ ಅನಿಸಿಕೆಗಳನ್ನು ತೋರ್ಪಡಿಸಿದ್ದುಂಟು. ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬದಲು ಹಿಂದಿನ ಬ್ಯಾಲಟ್ ಪೇಪರ್ ವೋಟಿಂಗ್ ವ್ಯವಸ್ಥೆ ಬಗ್ಗೆ ಜಡ್ಜ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ, ವಿವಿಪ್ಯಾಟ್ ವಿಚಾರದಲ್ಲಿ ನ್ಯಾಯಾಧೀಶರು ಕಾಮೆಂಟ್ ಮಾಡಿದ್ದು, ಚುನಾವಣೆ ನಡೆಸಲೆಂದು ಬೇರೆ ಸ್ವಾಯತ್ತ ಸಂಸ್ಥೆ ಇದೆ. ಚುನಾವಣೆಯನ್ನು ಕೋರ್ಟ್ ನಿಯಂತ್ರಿಸಲು ಆಗಲ್ಲ ಎಂದೂ ಹೇಳಿದ್ದಾರೆ.
ಇವಿಎಂಗಳಲ್ಲಿ ಚಲಾಯಿಸಿದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್‌ನೊಂದಿಗೆ ಪರಿಶೀಲನೆ ನಡೆಸಬೇಕು ಎಂದು ವಿವಿಧ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆ ಆಗಿದ್ದವು. ಅವೆಲ್ಲವನ್ನೂ ಒಟ್ಟು ಸೇರಿಸಿ ನ್ಯಾಯಪೀಠ ವಿಚಾರನೆ ನಡೆಸಿದೆ. ಈ ನ್ಯಾಯಪೀಠದಲ್ಲಿ ನ್ಯಾ. ಸಂಜೀವ್ ಖನ್ನ ಮತ್ತು ನ್ಯಾ.ದೀಪಂಕರ್ ದತ್ತ ಇದ್ದಾರೆ. ಅರ್ಜಿದಾರರ ಪರವಾಗಿ ಪ್ರಶಾಂತ್ ಭೂಷಣ್ ಮೊದಲಾದ ಹಿರಿಯ ವಕೀಲರು ವಾದಿಸಿದ್ದಾರೆ.
ವಿಚಾರಣೆ ಒಂದು ಹಂತದಲ್ಲಿ ನ್ಯಾಯಾಧೀಶರು ಪ್ರತಿಯೊಂದು ವಿವಿಪ್ಯಾಟ್ ಅನ್ನೂ ಪರಿಶೀಲನೆ ನಡೆಸಬೇಕೆಂಬ ವಾದವನ್ನು ಒಪ್ಪಲು ನಿರಾಕರಿಸಿದ್ದುಂಟು. ಇವಿಎಂನಲ್ಲಿ ಚಲಾವಣೆಯಾದ ಪ್ರತಿಯೊಂದು ಮತಕ್ಕೂ ವಿವಿಪ್ಯಾಟ್ ಜನರೇಟ್ ಮಾಡಿ ಅದನ್ನು ಮತ ಪೆಟ್ಟಿಗೆಗೆ ಹಾಕಿ ಆ ಮತವನ್ನು ಎಣಿಸುವ ಕೆಲಸ ಸಾಧುವಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದುಂಟು. ಹಾಗೆಯೇ, ಒಂದು ಚಿಹ್ನೆಗೆ ಚಲಾಯಿಸಿದ ಮತ ಬೇರೆ ಚಿಹ್ನಗೆ ಹೋಗುವಂತೆ ಇವಿಎಂ ಅನ್ನು ತಿರುಚಿರುವ ಒಂದೇ ಘಟನೆ ವರದಿಯಾಗಿಲ್ಲ. ಎಣಿಕೆ ಆಗುವ ಶೇ. ೫ರಷ್ಟು ವಿವಿಪ್ಯಾಟ್‌ಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅದನ್ನು ಎತ್ತಿ ತೋರಿಸಬಹುದಲ್ಲ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದರು.