ಶಿವಮೊಗ್ಗ: ಜಿಲ್ಲೆಯಲ್ಲಿ ಅಧಿಕಾರವು ರಾಜಕಾರಣಿಗಳ ಬಳಿಯಿದೆ. ಸಮಸ್ಯೆಗಳು ಸಾಕಷ್ಟಿವೆ. ಆದರೂ, ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ, ಬ್ಯಾಕೋಡು, ಎಸ್.ಎಸ್.ಭೋಗ್, ಹೆರಬೆಟ್ಟು, ಅರಳಗೋಡು, ಭಾನುಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೀತಾ ಮತ್ತು ನಟ ಶಿವರಾಜ್‌ಕುಮಾರ್ ಪ್ರಚಾರ ಸಭೆ ನಡೆಸಿದ್ದಾರೆ. ಸಭೆಗಳಲ್ಲಿ ಗೀತಾ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದರೆ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಗೀತಾ ಶಿವರಾಜಕುಮಾರ್ ಹೇಳಿದರು. ಮಲೆನಾಡಿನ ಜನರ ಒಡಲ ಸಂಕಟವನ್ನು ಹತ್ತಿರದಿಂದ ಆಲಿಸುವ ಅವಕಾಶ ನನಗೆ ದೊರಕಿದೆ. ಇಲ್ಲಿನ ಸಮಸ್ಯೆಗಳ ಅಂತರಾಳ ಕೂಡ ಅರಿವಿಗೆ ಬಂದಿವೆ. ಇಲ್ಲಿ, ಕುಡಿಯುವ ನೀರು, ಬಗರ್ ಹುಕುಂ ಸಮಸ್ಯೆ, ಭೂ-ಹಕ್ಕು, ರಸ್ತೆ, ಸಾರಿಗೆ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ, ಇಲ್ಲಿ ಜನರ ನಾಡಿ ಮಿಡಿತಕ್ಕೆ ಹತ್ತಿರವಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಕಳೆದ ೧೫ ವರ್ಷದ ಆಡಳಿತದ ಅವಧಿಯಲ್ಲಿ ಕ್ಷೇತ್ರದ ಸ್ಥಿತಿ ಗತಿಯನ್ನೇ ಉನ್ನತ ಸ್ಥಾನಕ್ಕೆ ಏರಿಸಬಹುದಾಗಿತ್ತು. ಕೇಂದ್ರದ ಹಂತದಲ್ಲಿ ಅನೇಕ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಬಹುದಾಗುತ್ತು. ಆದರೂ, ಅದು ಸಾಧ್ಯವಾಗದಿರುವುದು ಆಶ್ಚರ್ಯ ಮೂಡಿಸುತ್ತದೆ ಎಂದರು.
ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಗೀತಾಗೆ ಕ್ಷೇತ್ರದ ಜನರು ಅವಕಾಶ ಕಲ್ಪಿಸಿಕೊಡಬೇಕು. ಮಲೆನಾಡಿನ ಸಂಮೃದ್ಧ ಹಸಿರು, ಗೀತಾಗೆ ಉಸಿರಾಗಬೇಕು. ಇದಕ್ಕೆ ಕ್ಷೇತ್ರದ ಮತದಾರರು ಆಶೀರ್ವದಿಸಬೇಕು. ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗಲು ಗೀತಾಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ನಟ ಶಿವರಾಜ್‌ಕುಮಾರ್ ಮನವಿ ಮಾಡಿದರು.