ಚನ್ನಪಟ್ಟಣ: ಮಳೆ ನೀರು ಸಂಗ್ರಹದ ಜೊತೆಗೆ ಕೃಷಿಯಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡಲು ಮುಂದಾಗಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಬುಧವಾರ ನಡೆದ ೨೦೩ ನೇ ದಿನದ ಹೋರಾಟದಲ್ಲಿ ಮಾತನಾಡಿದ ಅವರು ಇಂದು ಮಂಡ್ಯ ಮತ್ತು ರಾಮನಗರ, ಬೆಂಗಳೂರಿನಲ್ಲಿ ರಾಜಕಾರಣಿಗಳ ಬಾಯಲ್ಲಿ ಮೇಕೆದಾಟು ವಿಚಾರ ಮಾರ್ಧನಿಸುತ್ತಿದೆ. ಈ ವಿಚಾರದಲ್ಲಿ ಕಾವೇರಿ ಕೊಳ್ಳದ ಎಲ್ಲಾ ಜನತೆ ದ್ವನಿ ಎತ್ತಿದ್ದರೆ ಇದು ಚಚೆಯ ವಿಚಾರ ಆಗುತ್ತಿತ್ತು. ಬೆಲೆ ಏರಿಕೆ, ರಾಮಮಂದಿರ, ಹಿಂದುತ್ವ ಇತರೆ ವಿಚಾರಗಳಿಗಿಂತ, ಮೇಕೆದಾಟು ವಿಚಾರ ಹೆಚ್ಚು ಮುನ್ನೆಲೆಗೆ ಬರಬೇಕಾಗಿತ್ತು. ಮಂಡ್ಯದ ಬಹುತೇಕ ಗ್ರಾಮದಲ್ಲಿ ಬೆಳೆ ಹಾಳಾಗಿದ್ದು ಬೆಂಕಿ ತಾಗಿಸಿದರೆ ಹೊತ್ತಿ ಉರಿಯುವಂತೆ ಒಣಗಿದೆ. ಪ್ರಾಧಿಕಾರ ಮತ್ತು ಸುಪ್ರಿಂ ಕೋರ್ಟ್‌ನ ಅವೈಜ್ಞಾನಿಕ ತೀರ್ಪು ಇದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮರುಕಳಿಸಬಾರದು ಎಂದು ಮೇಕೆದಾಟು ಯೋಜನೆ ಆಗಬೇಕು ಮತ್ತು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೊಡಗಿನ ಭಾಗದಲ್ಲಿ ಮಳೆ ಆಧಾರಿತ ನೀರು ಹಂಚಿಕೆ ಸಂಕಷ್ಟ ಸೂತ್ರ ರಚಿಸಬೇಕು ಎಂದು ಆಗ್ರಹಿಸಿದರು.
ನಾವು ಹೆಚ್ಚು ನೀರು ತೆಗೆದುಕೊಳ್ಳದ ಬೆಳೆಯನ್ನು ಬೆಳೆಯುವ ಜೊತೆಗೆ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಮನೆ ಮೇಲೆ ಬಿದ್ದ ಮಳೆ ನೀರನ್ನು ಪೈಪಿನ ಮೂಲಕ ಸಂಗ್ರಹ ಮಾಡಲು ಒಂದು ಗುಂಡಿಯನ್ನು ತೆಗೆದು ನೀರು ಹಿಂಗುವಂತೆ ಮಾಡಬೇಕು, ಮಳೆ ನೀರು ಅಲ್ಲಲ್ಲಿ ನಿಲ್ಲುವಂತೆ ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡುವುದು, ಹರಿಯುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಹಿಂಗಿಸುವ ಕೆಲಸ ಮಾಡಬೇಕು, ಜೊತೆಗೆ ಮರುಳು ಸಂರಕ್ಷಣೆ ಮಾಡುವ ಮೂಲಕ ನಾವು ಕೂಡ ಪರಿಸರ ಉಳಿಸುವ ಕೆಲಸಕ್ಕೆ ಕೈ ಜೋಡಿಸಬೇಕು, ಇಂದು ಬಿಸಿಲಿನ ತಾಪದಿಂದ ನೆಲೆದ ಮೇಲಿನ ನೀರು ಆವಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸೂರ್ಯನ ಕಿರಣ ಬೀಳದಂತೆ ಆಳವಾದ ಗುಂಡಿಗಳನ್ನು ತೋಡಿ ನೀರನ್ನು ಸಂಗ್ರಹ ಮಾಡಲು ಮುಂದಾಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡ(ಎನ್‌ಜಿ)ಅವರು ಮಾತನಾಡಿ, ನಮ್ಮಲ್ಲಿ ಹೆಚ್ಚು ನೀರಿದ್ದಾಗ ನೀರನ್ನು ದುರುಪಯೋಗ ಮಾಡಿಕೊಳ್ಳುವುದು ನಮ್ಮ ದೌರ್ಬಲ್ಯವಾಗಿದೆ. ಆದರೆ ನೀರಿನ ಕೊರತೆ ಇರುವ ಇಸ್ರೇಲ್‌ನಲ್ಲಿ ಕೊಳಚೆ ನೀರನ್ನು ಶುದ್ದೀಕರಿಸಿ ಕುಡಿಯುವ ಪರಿಸ್ಥಿತಿ ಇದ್ದರೂ ಅಲ್ಲಿ ಪಾಟುಗಳಲ್ಲಿ ಕಡಿಮೆ ನೀರು ಬಳಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಅಪರೂಪಕ್ಕೆ ಮಳೆಯಾಗುವ ರಾಜಸ್ಥಾನ್ ರಾಜ್ಯದಲ್ಲಿ ಮಳೆ ನೀರನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಎಂದು ಅಲ್ಲಿನ ನೀರಾವರಿ ತಜ್ಞರು ಸಲಹೆ ನೀಡುತ್ತಾರೆ ಎಂದರೆ ಇದು ಬೆಂಗಳೂರು ಜನತೆಯನ್ನು ಬೇರೆಯವರು ಹಾಸ್ಯಾಸ್ಪದವಾಗಿ ನೋಡುವಂತಾಗಿದೆ. ಈ ನಿಟ್ಟಿನಲ್ಲಿ ಈಗಲಾದರೂ ಬೆಂಗಳೂರಿನ ಜನತೆ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಲಿ. ಜೊತೆಗೆ ಚುನಾವಣೆಯಲ್ಲಿ ಮೇಕೆದಾಟು ಬಗ್ಗೆ ಮಾತನಾಡುವ ರಾಜಕಾರಣಿಗಳು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಮೇಕೆದಾಟು ಅನುಷ್ಠಾನಕ್ಕೆ ಶ್ರಮಿಸಬೇಕು ಎಂದರು.
ವೆಂಕಟೇಶ್(ಸೇಟು) ಮಾತನಾಡಿ, ಇಂದು ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗಿದೆ. ರಮೇಶ್‌ಗೌಡರು ಮಾಡುತ್ತಿರುವ ಈ ಹೋರಾಟ ಸಾರ್ವಜನಿಕರ ಹಿತಕ್ಕಾಗಿ, ಈ ನಿಟ್ಟಿನಲ್ಲಿ ಸಾರ್ವಜನಿಕರು ಈ ಹೋರಾಟಕ್ಕೆ ಹೆಚ್ಚು ಭಾಗವಹಿಸಬೇಕು. ಜೊತೆಗೆ ತಮಿಳುನಾಡಿಗೆ ನೀರು ಬಿಡಲಾಗಿ ರಾಜ್ಯದಲ್ಲಿನ ನೀರಿನ ಸಮಸ್ಯೆ ಏನಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಸರ್ಕಾರ ಮುಂದಾಗಬೇಕು ಎಂದರು. ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರ್‍ಯಾಂಬೋ ಸೂರಿ ಜಯರಾಮು, ರಾಜು, ನಿಂಗೇಗೌಡ(ಎನ್) ಡಿಎಸ್‌ಎಸ್ ಸಂಚಾಲಕ ವೆಂಕಟೇಶ್(ಸೇಟು), ಮೆಣಸಿನಗಹಳ್ಳಿ ರಾಮಕೃಷ್ಣಪ್ಪ್ಪ, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ಆರ್. ಶಂಕರ್ ಇನ್ನಿತರರು ಇದ್ದರು.