ಮೈಸೂರು: ನುಡಿದಂತೆ ನಡೆದು ೫ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ೯ ತಿಂಗಳಲ್ಲಿಯೇ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕೈಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಗೆಲ್ಲಿಸಬೇಕೆಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಭರತನಗರದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ದೇಶದಲ್ಲಿ ಅಶಾಂತಿ ಮೂಡಿಸುತ್ತ ಹಿಂದು ಮುಸ್ಲಿಂ ಎಂದು ಜಾತಿಜಾತಿಗಳನ್ನು ಎತ್ತಿಕಟ್ಟಿ, ಕೋಮುಭಾವನೆ ಸೃಷ್ಟಿಸಿ ಅಲ್ಪಸಂಖ್ಯಾತರು ನೆಮ್ಮದಿಯಾಗಿ ಬದುಕದಂತೆ ಮಾಡಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುತ್ತ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಭಾವನಾತ್ಮಕ ಸಂಬಂಧಗಳ ಮೇಲೆ ಮತ ಕೇಳುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ೧೦ ವರ್ಷದಲ್ಲಿ ೧ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಬಿಜೆಪಿ ಪಕ್ಷದ ನಾಯಕರು ಚುನಾವಣೆ ಬಂದಾಗ ಮಾತ್ರ ಕರ್ನಾಟಕಕ್ಕೆ ಬಂದು ಟಾಟಾ ಮಾಡಿ ಹೋಗುತ್ತಾರೆ. ಮೋದಿ ಮುಖ ನೋಡಿ ಮತ ನೀಡಿ ಎನ್ನುತ್ತಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಲು ಕೊಟ್ಟ ಮಾತಿನಂತೆ ನಡೆದ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಬೆಂಬಲವಿರಲಿ. ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರು ನೆಮ್ಮದಿಯಾಗಿ ಜೀವನ ನಡೆಸಬಹುದು. ಆದ್ದರಿಂದ ಎಂ. ಲಕ್ಷ್ಮಣ್‌ರವರಿಗೆ ಮತ ಚಲಾಯಿಸಿ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ಲಾ, ಅಜ್ಮಲ್ ಪಾಷ, ನಾಡನಹಳ್ಳಿ ರವಿ, ಇಮ್ರಾನ್, ಹಯಾತ್, ಸಿಕಂದರ್ ಯೂಸೂಫ್, ರಫಿಕ್, ಟಿಪ್ಪು, ಷಕಿಲ್, ಕುಮಾರ್, ನಾಗರಾಜ್, ಪ್ರಕಾಶ್ ಹಾಜರಿದ್ದರು.