ಪಿರಿಯಾಪಟ್ಟಣ: ಲೋಕಸಭಾ ಚುನಾವಣೆಯ ಮತದಾನವನ್ನು ತಾಲೂಕಿನಲ್ಲಿ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಸಲು ವಿವಿಧ ಇಲಾಖೆ ಸಹಕಾರದೊಂದಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮೂಡ ಕಾರ್ಯದರ್ಶಿ ಜಿ.ಡಿ ಶೇಖರ್ ಮಾಹಿತಿ ನೀಡಿದರು.
ಪಟ್ಟಣದ ತಾಲೂಕು ಆಡಳಿತ ಭವನ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲೂಕಿನಲ್ಲಿ ಪುರುಷ ಮತದಾರರು 99,113 ಮಹಿಳಾ ಮತದಾರರು 99,508 ಇತರೆ 4 ಸೇರಿ ಒಟ್ಟು 1,98,625 ಮತದಾರರಿದ್ದಾರೆ, 195 ಸ್ಥಳಗಳಲ್ಲಿ ಒಟ್ಟು 235 ಬೂತ್ ತೆರೆಯಲಾಗಿದೆ, 235 ಪಿಆರ್ ಓ, 235 ಎಪಿಆರ್ ಓ, 518 ಪಿಓ ಸೇರಿದಂತೆ 96 ಕಾಯ್ದಿರಿಸಿದ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರು ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದು, ಆಯೋಗದ ಮಾರ್ಗಸೂಚಿಯಂತೆ ಈಗಾಗಲೇ ತರಬೇತಿ ನೀಡಲಾಗಿದೆ, ತಾಲೂಕಿನ ವಿವಿದೆಡೆ ವಿಶೇಷ ಮತಗಟ್ಟೆಗಳನ್ನು ತೆರೆದಿದ್ದು ಮಹಿಳೆಯರಿಗೆ ವಿಶೇಷವಾಗಿ ಸಖಿ ಮತಗಟ್ಟೆಗಳನ್ನು ಕಣಗಾಲು ಬೆಟ್ಟದಪುರ ಕಿತ್ತೂರು, ರಾವಂದೂರು ಆಲನಹಳ್ಳಿ ಮತ ಕೇಂದ್ರಗಳಲ್ಲಿ ತೆರೆಯಲಾಗಿದೆ, ವಿಶೇಷ ಚೇತನರಿಗಾಗಿ ಬೈಲಕುಪ್ಪೆಯಲ್ಲಿ, ಥೀಮ್ ಬೇಸ್ಡ್ ಮತಗಟ್ಟೆಯನ್ನು ಪಂಚವಳ್ಳಿಯಲ್ಲಿ, ಯುವ ಮತದಾರರಿಗಾಗಿ ಕಂಪಲಾಪುರದಲ್ಲಿ ಮತ್ತು ರಾಣಿ ಗೇಟ್ ಮುತ್ತೂರು ಹಾಗೂ ದೊಡ್ಡಹೊಸೂರು ಗ್ರಾಮಗಳಲ್ಲಿ ಸಾಂಪ್ರದಾಯಿಕ ವಿಶೇಷ ಮತಗಟ್ಟೆಗಳನ್ನು ತೆರಿಯಲಾಗಿದೆ ಎಂದರು.
ಈವರೆಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6,51,700 ರೂ ಗಳನ್ನು ಚೆಕ್ ಪೋಸ್ಟ್ ತಪಾಸಣೆ ವೇಳೆ ವಶಪಡಿಸಿಕೊಳ್ಳಲಾಗಿದ್ದು ಅಬಕಾರಿ ಇಲಾಖೆಯಿಂದ 1,39,318 ರೂ ಮೌಲ್ಯದ 306.280 ಎಂಎಲ್ ಮಧ್ಯ ವಶಪಡಿಸಿಕೊಂಡು 145 ಪ್ರಕರಣ ದಾಖಲಿಸಲಾಗಿದೆ, ಚುನಾವಣಾ ಕಾರ್ಯಕ್ಕಾಗಿ ಪಿರಿಯಾಪಟ್ಟಣ ತಾಲೂಕಿನಿಂದ ಹೊರಗೆ ತೆರಳುವ ಹಾಗೂ ಪಿರಿಯಾಪಟ್ಟಣಕ್ಕೆ ಆಗಮಿಸುವ ಸಿಬ್ಬಂದಿಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ, ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗದಂತೆ ನಿಗಾ ವಹಿಸಲಾಗಿದೆ, ಮತದಾರರಿಗೆ ತಮ್ಮ ಮತಗಟ್ಟೆ ಮಾಹಿತಿಯನ್ನು ಈಗಾಗಲೇ ತಲುಪಿಸಿ ಮತದಾನ ಯಶಸ್ವಿಯಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹುಣಸೂರು ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಅವರು ಮಾತನಾಡಿ ಪಿರಿಯಾಪಟ್ಟಣ ತಾಲೂಕಿನ ಸೂಕ್ಷ್ಮ ಅತಿ ಸೂಕ್ಷ್ಮ ಹಾಗೂ ಎಲ್ಲಾ ಮತಗಟ್ಟೆ ಕೇಂದ್ರಗಳ ಬಳಿ ಅಗತ್ಯ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಹಾಗೂ ಐಟಿಬಿಪಿ ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ನಿಯೋಜಿಸಿ ಡಿಎಸ್ ಪಿ ಮಹದೇಶ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ಎಎಸ್ಐ ಕಾರ್ಯನಿರ್ವಹಿಸಲಿದ್ದು ಶಾಂತಿಯುತ ಮತದಾನ ನಡೆಸಲು ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ಸುರೇಂದ್ರ ಮೂರ್ತಿ, ಸ್ವೀಪ್ ಸಮಿತಿ ಅಧ್ಯಕ್ಷ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್, ನೋಡಲ್ ಅಧಿಕಾರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಸರ್ಕಲ್ ಇನ್ಸ್ಪೆಕ್ಟರ್ ವೀಣಾ, ಚುನಾವಣಾ ಶಾಖೆ ಗ್ರಾಮ ಲೆಕ್ಕಾಧಿಕಾರಿಗಳಾದ ನವೀನ್ ಎಂ ರಾವ್, ದೀಪಕ್, ಪ್ರದೀಪ್ ಗಡೇಕರ್ ಮತ್ತಿತರಿದ್ದರು.