Saturday, April 19, 2025
Google search engine

Homeರಾಜ್ಯಸುದ್ದಿಜಾಲಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ: ನಿರ್ಭೀತಿಯಿಂದ ತಪ್ಪದೇ ಎಲ್ಲರೂ ಮತದಾನ ಮಾಡಿ: ಡಾ. ಅವಿನಾಶ್ ಮೆನನ್...

ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ: ನಿರ್ಭೀತಿಯಿಂದ ತಪ್ಪದೇ ಎಲ್ಲರೂ ಮತದಾನ ಮಾಡಿ: ಡಾ. ಅವಿನಾಶ್ ಮೆನನ್ ರಾಜೇಂದ್ರನ್

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ-೨೦೨೪ರ ಮತದಾನವು ಏ. ೨೬ರ ಶುಕ್ರವಾರ ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯಸವರೆಗೆ ನಡೆಯಲಿದ್ದು, ಮತದಾನಕ್ಕೆ ಜಿಲ್ಲಾಡಳಿತದ ವತಿಯಿಂದ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೫ ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಒಂದು ನೋಟಾ ಆಯ್ಕೆ ಇರುತ್ತದೆ. ಮತಗಟ್ಟೆಗಳ ವಿವರಗಳನ್ನು ಚುನಾವಣಾ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಮತದಾನ ಮಾಡುವ ಸಂದರ್ಭದಲ್ಲಿ ಅರ್ಹ ಗುರುತಿನ ಚೀಟಿಯನ್ನು ಸಲ್ಲಿಸಿ ಮತದಾನ ಮಾಡಬಹುದಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯದ ದೃಷ್ಠಿಯಿಂದ ಮತಗಟ್ಟೆಗಳಿಗೆ ಮಕ್ಕಳನ್ನು ಕರೆತರಬಾರದು ಹಾಗೂ ಮತಗಟ್ಟೆಗಳಲ್ಲಿ ಸಂಪೂರ್ಣವಾಗಿ ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ ಎಂದರು.

ಮತದಾರರ ವಿವರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ೧೪೨೪೬೮೫ ಪುರುಷ ಮತದಾರರು, ೧೩೭೭೫೭೦ ಮಹಿಳಾ ಮತದಾರರು ಹಾಗೂ ೩೨೫ ತೃತೀಯ ಲಿಂಗ ಮತದಾರರಿದ್ದು, ಒಟ್ಟಾರೆ ೨೮೦೨೫೮೦ ಮತದಾರರಿದ್ದಾರೆ. ಕುಣಿಗಲ್ ತಾಲ್ಲೂಕಿನಲ್ಲಿ ೨೦೩೨೨೮, ರಾಜರಾಜೇಶ್ವರಿನಗರದಲ್ಲಿ ೫೦೪೬೧೭, ಬೆಂಗಳೂರು ದಕ್ಷಿಣದಲ್ಲಿ ೭೫೦೭೮೫, ಆನೇಕಲ್‌ನಲ್ಲಿ ೪೨೩೮೪೪, ಮಾಗಡಿಯಲ್ಲಿ ೨೩೬೪೮೩, ರಾಮನಗರದಲ್ಲಿ ೨೨೧೦೯೮, ಕನಕಪುರದಲ್ಲಿ ೨೩೧೨೬೨, ಚನ್ನಪಟ್ಟಣದಲ್ಲಿ ೨೩೧೨೬೩ ಮತದಾರರಿದ್ದಾರೆ.

ಮತಗಟ್ಟೆಗಳ ವಿವರ: ಒಟ್ಟಾರೆ ೨೮೨೯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು. ೨೩೩ ಸೂಕ್ಷ್ಮ ಮತಗಟ್ಟೆಗಳಿಗೆ ೪೦೦ ಜನ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.

ವಿಶೇಷ ಮತಗಟ್ಟೆ ಸ್ಥಾಪನೆ: ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫ ಸಖೀ ಮತಗಟ್ಟೆಗಳು, ೧ ವಿಕಲಚೇತನರ ನಿರ್ವಹಣೆ ಮತಗಟ್ಟೆ, ೧ ಯುವಜನ ನಿರ್ವಹಣೆಯ ಮತಗಟ್ಟೆ, ೧ ಧ್ಯೇಯ ಆಧಾರಿತ ಮತಗಟ್ಟೆ, ೧ ಸಾಂಪ್ರದಾಯಿಕ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಪೊಲೀಸ್ ಬಂದೋಬಸ್ತ್: ಮತದಾನ ಸುಸೂತ್ರವಾಗಿ ನಡೆಯಲು ಪೊಲೀಸ್ ಇಲಾಖೆ ವತಿಯಿಂದ ೨೩೦೦ ಜನ ಪೊಲೀಸರು, ಕೆಎಸ್‌ಆರ್‌ಪಿಯಿಂದ ೫ ತುಕಡಿಗಳು, ೯೪ ಜನ ಸೆಕ್ಟರ್ ಅಧಿಕಾರಿಗಳು, ೬೩ ಜನ ತುಕಡಿಗಳು, ೧೦೪೧ ಸಿವಿಲ್ ಪೊಲೀಸರು, ೮೨೪ ಗೃಹ ರಕ್ಷಕರನ್ನು ನೇಮಕ ಮಾಡಲಾಗಿದೆ. ಯಾವುದೇ ಆಮಿಷಗಳಿಗೆ ಒಳಪಡದೆ ಮತದಾನ ಮಾಡುವಂತೆ ಹಾಗೂ ಯಾವುದೇ ದೂರುಗಳಿದ್ದಲ್ಲಿ ಟೊಲ್ ಫ್ರೀ ಸಂಖ್ಯೆ: ೧೯೫೦ಗೆ ಮಾಹಿತಿ ನೀಡಿದ್ದಲ್ಲಿ, ಇಲಾಖೆಯ ಸಿಬ್ಬಂದಿಗಳು ಕ್ರಮ ವಹಿಸುವರು. ಮತಗಟ್ಟೆಯಿಂದ ೨೦೦ ಮೀಟರ್ ಅಂತರದಲ್ಲಿ ಮತಯಾಚನೆ ಮಾಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಮಾಹಿತಿ ನೀಡಿದರು.

ಪೂರ್ವ ಪ್ರಮಾಣೀಕರಣ ಅನುಮತಿ: ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಣ ಮಾಧ್ಯಮದಲ್ಲಿ ಯಾವುದೇ ಪ್ರಚೋದಕ, ತಪ್ಪು ದಾರಿಗೆಳೆಯುವ ಅಥವಾ ದ್ವೇದ ಜಾಹೀರಾತುಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಚಿತಪಡಿಸಿಕೊಳ್ಳಲು, ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಯಾವುದೇ ಇತರ ಸಂಸ್ಥೆಗಳು ಅಥವಾ ವ್ಯಕ್ತಿಗಳು ರಾಜಕೀಯ ಜಾಹೀರಾತುಗಳನ್ನು ಮತದಾನದ ದಿನ ಹಾಗೂ ಮತದಾನದ ಮುನ್ನ ದಿನದಂದ (ಏಪ್ರಿಲ್ ೨೫ ಹಾಗೂ ಏಪ್ರಿಲ್ ೨೬) ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವ-ಪ್ರಮಾಣೀಕರಣ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

ಮತದಾನ ದಿನದಂದು ವೇತನ ಸಹಿತ ರಜೆ: ಏಪ್ರಿಲ್ ೨೬ ರಂದು ಮತದಾನ ನಡೆಯಲಿದ್ದು, ಮತದಾನ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕಾ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ – ೧೯೫೧ ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲಾಗುವುದು ಎಂದರು.

ವಿಕಲಚೇತನರ ಮತದಾರರು ಮತದಾನ ಮಾಡಲು ವಿವಿಧ ಸೌಲಭ್ಯ: ವಿಕಲಚೇತನರ ಮತದಾರರು ಮತದಾನ ಮಾಡಲು ಅನುವಾಗುವಂತೆ ವಿಲ್‌ಚೇರ್, ರ್‍ಯಾಂಪ್ (Wheel Chair, Ramp) ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೃಷ್ಠಿದೋಷವುಳ್ಳ ವಿಕಲಚೇತನರಿಗೆ ಮ್ಯಾಗ್ನಿಫೇಯಿಂಗ್ ಗ್ಲಾಸ್ ಸೌಲಭ್ಯ ಹಾಗೂ ಬ್ರೈಲ್ ಲಿಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಮಾಹಿತಿ ೭ಎ ಡಮ್ಮಿ ಪೋಸ್ಟಲ್ ಬ್ಯಾಲೆಟ್‌ನ ಸೌಲಭ್ಯವನ್ನು ಪ್ರತಿ ಮತಗಟ್ಟೆಯಲ್ಲಿ ಒದಗಿಸಲಾಗುವುದು. ಚುನಾವಣೆ ನೀತಿ ಸಂಹಿತೆ ೧೯೬೧ರ ನಿಯಮ ೪೯ಎನ್ ರನ್ವಯ ದೃಷ್ಠಿದೋಷವುಳ್ಳ ವಿಕಲಚೇತನರು ಮತದಾನ ಮಾಡಲು ಮತಗಟ್ಟೆಗೆ ಜೊತೆಗಾರರನ್ನು ಕರೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ಸಹಾಯವನ್ನು ಪಡೆದು ಮತ ಚಲಾಯಿಸಬಹುದಾಗಿದೆ ಎಂದರು.

ಹೋಂಸ್ಟೇ, ಹೋಟೆಲ್ಸ್, ರೆಸಾರ್ಟ್ಸ್‌ಗಳಲ್ಲಿ ವಾಸ್ತವ್ಯ ನಿಷೇಧ: ೨೩-ಬೆಂಗಳೂರು ಗ್ರಾಮಾಂತರ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಮತದಾನ ಪ್ರಕ್ರಿಯೆಯು ಏ. ೨೬ರಂದು ನಡೆಯಲಿದ್ದು, ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯದ ಮುಂಚಿನ ೪೮ ಗಂಟೆಗಳ ಅವಧಿಯಲ್ಲಿ ಅಂದರೆ ಏ. ೨೪ರ ಸಂಜೆ ೬ ಗಂಟೆಯಿಂದ ಏ. ೨೬ರ ಮಧ್ಯರಾತ್ರಿ ೧೨ ಗಂಟೆಯವರೆಗೆ ರಾಮನಗರ ಜಿಲ್ಲೆಯಾದ್ಯಂತ ಇರುವ ಎಲ್ಲಾ ವಸತಿಯುತ ಹೋಟೆಲ್ಸ್, ರೆಸಾರ್ಟ್ಸ್ ಹಾಗೂ ಹೋಂಸ್ಟೇಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಸಮಾರಂಭ, ಪ್ರಚಾರ ಸಭೆ ಹಾಗೂ ರಾಜಕೀಯ ಚಟುವಟಿಕೆಗಳು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ನಿಷೇಧ : ರಾಮನಗರ ಜಿಲ್ಲೆಯಲ್ಲಿ ಚುನಾವಣೆ ಶಾಂತಿ, ಮುಕ್ತ, ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಯಲು ಏ. ೨೬ರಂದು ಮತದಾನ ನಡೆಯುವುದರಿಂದ ಏ. ೨೪ರ ಸಂಜೆ ೬ ಗಂಟೆಯಿಂದ ಏ. ೨೬ರ ಸಂಜೆ ೬ ಗಂಟೆಯವರೆಗೆ ಮತ್ತು ಜೂನ್ ೪ ರಂದು ಮತ ಎಣಿಕೆ ನಡೆಯುವುದರಿಂದ ಜೂನ್ ೩ರ ಮಧ್ಯರಾತ್ರಿ ೧೨ ಗಂಟೆಯಿಂದ ಜೂನ್ ೪ರ ಮಧ್ಯರಾತ್ರಿ ೧೧.೫೯ ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಿ ಒಣದಿನಗಳೆಂದು ಘೋಷಿಸಿ, ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು.

ನಿಷೇಧಾಜ್ಞೆ ಜಾರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಏ. ೨೪ರ ಸಂಜೆ ೬ ಗಂಟೆಯಿಂದ ಏ. ೨೬ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-೧೯೭೩ರ ಕಲಂ ೧೪೪ ರಡಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.

ಪ್ರಕರಣಗಳ ವಿವರ: ಎಂಸಿಸಿ, ಎಸ್‌ಎಫ್‌ಟಿ, ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ೫ ಕೋಟಿ ೭೧ ಲಕ್ಷ ನಗದು, ೧ ಕೋಟಿ ೭೦ ಲಕ್ಷ ಮೌಲ್ಯದ ೫೪೩೨೪ ಲೀಟರ್ ಮದ್ಯ, ೨.೫೦ ಲಕ್ಷ ಮೌಲ್ಯದ ೨.೫೦ ಕೆ.ಜಿ ಗಾಂಜ, ೨೬ ಕೋಟಿ ೮೧ ಲಕ್ಷ ರೂ. ಮೌಲ್ಯದ ಸೀರೆ, ಕುಕ್ಕರ್, ಬಂಗಾರ, ವಿವಿಧ ಮಾದರಿಯ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಸ್ವೀಪ್ ಚಟುವಟಿಕೆಗಳು: ಮತದಾನ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಲ್ಲಿಯೂ ಸಹ ಸೈಕಲ್ ರ್‍ಯಾಲಿ, ಜಾಥಾ, ನಾಟಕ, ವಿಕಲಚೇತನರಿಂದ ತ್ರಿಚಕ್ರ ವಾಹನ ರ್‍ಯಾಲಿ, ಸೆಲ್ಫಿ ಹಾಗೂ ಸಹಿ ಸಂಗ್ರಹ ಅಭಿಯಾನ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮತದಾನ ಕುರಿತು ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಇದ್ದರು.

RELATED ARTICLES
- Advertisment -
Google search engine

Most Popular