ಧಾರವಾಡ : ಭಾರತ ಚುನಾವಣಾ ಆಯೋಗದ ಎಲ್ಲರೂ ಒಳಗೊಳ್ಳುವಿಕೆ ಆಶಯದಂತೆ ಮತ್ತಿ ಮತದಾನ ಹಕ್ಕು ಪಡೆದಿರುವ ಅರ್ಹ ಯಾರು ಮತದಾನದಿಂದ ಹೊರಗುಳಿಯದಂತೆ ಜಾಗೃತಿವಹಿಸಲು ಪ್ರಜಾಪ್ರಭುತ್ವದಲ್ಲಿ ಮತದಾನದ ವಿನೂತನ ಕ್ರಮವಾದ ಮನೆಯಿಂದಲೇ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ಗಂಟೆಯಿಂದ ಜಿಲ್ಲೆಯಲ್ಲಿ ಆರಂಭವಾಗಿದ್ದು, ನೋಂದಾಯಿತ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಖುಷಿಯಿಂದ ತಮ್ಮ ಮನೆಯಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿ, ಜಿಲ್ಲಾಡಳಿತಕ್ಕೆ, ಚುನಾವಣಾ ಆಯೋಗಕ್ಕೆ ಧನ್ಯತೆ ಅರ್ಪಿಸಿದರು.
ಮನೆಯಿಂದಲೇ ಮತದಾನ ಪ್ರಕ್ರಿಯೆ ಅತೀ ಮಹತ್ವದ್ದು ಮತ್ತು ದೈಹಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಅಶಕ್ತರಾಗಿರುವವರಿಗೆ ಇದು ಅತ್ಯಂತ ಉಪಯುಕ್ತವಾಗಿದೆ. ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿರುವ ಧಾರವಾಡ ನಗರದ ಕಮಲಾಪುರ, ಮಾಳಾಪುರ, ಸಾಧನಕೇರಿ, ದೊಡ್ಡನಾಯಕನಕೋಪ್ಪ, ಸಾರಸ್ವತಪುರ ಪ್ರದೇಶಗಳಿಗೆ ಇಂದು ಬೆಳಿಗ್ಗೆಯಿಂದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತೆರಳಿ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಮನೆಗಳಿಗೆ ಖುದ್ದು ಭೇಟಿ ನೀಡಿ, ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಮತ್ತು ಮತ ಚಲಾಯಿಸಿದ ಮತದಾರರನ್ನು ಮಾತನಾಡಿಸಿದರು.

ನಂತರ ಅವರು ಮಧ್ಯಾಹ್ನ ಧಾರವಾಡ ಕಮಲಾಪುರ ಶಾಲೆ ನಂಬರ 4 ರಲ್ಲಿ ಸ್ಥಾಪಿಸಿರುವ ವಿವಿಧ ಮತಗಟ್ಟೆಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
