ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಂಡ್ಯ ಲೋಕಸಭಾ ಚುನಾವಣೆ ಸಂಬಂಧ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಯಾವುದೇ ಗೊಂದಲವಿಲ್ಲದೇ ನಿರ್ಭೀತಿಯಿಂದ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಬಿ.ಸುಪ್ರೀಯ ಬಣಗಾರ್ ತಿಳಿಸಿದರು.
ನಾಳೆ ನಡೆಯುವ ಚುನಾವಣೆಗೆ ಯಾವ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿರುವ ಸಂಬಂದ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಒಂದು ದಿನ ಬಾಕಿ ಇದ್ದು, ಏ.೨೬ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮಂಡ್ಯ ಲೋಕಸಭಾ ಚುನಾವಣಾ ವ್ಯಾಪ್ತಿಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ೨೨೮೭೭೬ ಒಟ್ಟು ಮತದಾರರಿದ್ದು, ಈ ಪೈಕಿ ೧೦೮೦೦೮ ಪುರುಷರು ಮತದಾರರಿದ್ದರೆ, ೧೧೦೭೬೬ ಮಹಿಳೆಯರಿದ್ದಾರೆ. ೧೨ ಮಂದಿ ಲಿಂಗತ್ವ ಅಲ್ಪಸಂಖ್ಯತಾ ಮತದಾರರಿದ್ದು, ಕ್ಷೇತ್ರದಲ್ಲಿ ಒಟ್ಟು ೨೫೨ ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಎಲ್ಲಾ ಕೇಂದ್ರಗಳಿಗೂ ೧೩೧೬ ಮತಗಟ್ಟೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ಮತದಾನಕ್ಕೆ ೪೨೦ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ, ಜೊತೆಗೆ ೫೬ ಮಂದಿ ಸಿ.ಆರ್‌ಪಿ.ಎಫ್ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ೪೫ ಬಸ್ ವ್ಯವಸ್ಥೆ: ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ಹಾಗೂ ಸಿಬ್ಬಂದಿಯನ್ನು ಕರೆದೊಯ್ಯಲು ೪೫ ಕೆಎಸ್‌ಆರ್‍ಟಿ ಬಸ್‌ಗಳು, ೩೦ ಕಾರ್ ಹಾಗೂ ೪ ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಏ.೨೬ರಂದು ಶುಕ್ರವಾರ ಬೆಳಗ್ಗೆ ೭ರಿಂದ ಸಂಜೆ ೬ರವರೆಗೆ ಮತದಾನ ನಡೆಯಲಿದ್ದು, . ಒಂದು ವೇಳೆ ಸಂಜೆ ಆರು ಗಂಟೆಯ ನಂತರವೂ ಮತದಾನ ಮುಗಿಯದೇ, ಮತದಾರರು ಮತಗಟ್ಟೆ ಬಳಿ ಸರತಿಯಲ್ಲಿದ್ದರೆ, ಅಂತಹವರಿಗೆ ಟೋಕನ್ ನೀಡಿ ೭ ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. ಈ ಬಾರಿ ಮತದಾನ ಮಾಡಿದ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತಿದೆ. ಒಂದು ವೇಳೆ ತೋರು ಬೆರಳಿಲ್ಲದವರಿಗೆ ಅದರ ಪಕ್ಕದ ಬೆರಳಿಗೆ ಹಾಕಲಾಗುವುದು. ಅಂಗೈ ಇಲ್ಲದವರಿಗೆ ತೋಳಿಗೆ ಶಾಹಿ ಹಾಕಬಹದು. ಎಡಗೈ ಇಲ್ಲದ ವ್ಯಕ್ತಿಗೆ ಬಲಗೈ ತೋರು ಬೆರಳಿಗೆ ಅಥವಾ ಎರಡೂ ಕೈಗಳಿಲ್ಲದಿದ್ದರೆ ಕಾಲು ಬೆರಳಿಗೆ ಶಾಹಿ ಹಾಕಲಾಗುತ್ತಿದೆ ಎಂದರು.
ಕೆಲವು ಮತಗಟ್ಟೆಗಳಲ್ಲೂ ಈ ಬಾರಿ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಜತೆಗೆ ೨೫೨ ಮತಗಟ್ಟ ೩ ಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದ್ದು, ೭ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ೪೯ ಮೈಕ್ರೋ ಅಬ್ಸರ್ವರ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಈ ಬಾರಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೂರಕಾವಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಡಿಕೊಡಲಾಗಿದೆ. ಅಲ್ಲದೇ ಮತಗಟ್ಟೆಗೆ ಬರುವ ಮತದಾರರು ಬಿಸಿಲಿನಲ್ಲಿ ನಿಲ್ಲದಂತೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಯಾವುದೇ ಗೊಂದಲ ಏರ್ಪಡದಂತೆ ಪೊಲೀಸ್ ಭದ್ರತೆ ಮಾಡಲಾಗಿದೆ ಎಂದರು. ಅಂಗವಿಕಲರು ಮತ್ತು ಹಿರಿಯ ನಾಗರೀಕರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳೇ ಮತದಾನದಿಂದ ವಂಜಿತರಾಗಿದ್ದಾರೆ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಮಂಡ್ಯ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿರುವ ಮತಗಟ್ಟೆ ಸಿಬ್ಬಂದಿಗಳು ಹಾಗೂ ಮೈಕ್ರೋ ಅಬ್ಸರ್ವರ್ ಅವರುಗಳು ಅಂಚೆ ಮತದಾನ ನೀಡಲ್ಲ ಆದ್ದರಿಂದ ನಮಗೆ ಮತದಾನ ಮಾಡುವ ಅವಕಾಶ ಕಲ್ಪಿಸಿ, ಎಲ್ಲರಿಗೂ ಮತದಾನ ಮಾಡಿ ಎಂದು ಪ್ರಚಾರ ಮಾಡುವ ನಮಗೆ ಮತದಾನ ಮಾಡಲು ಈ ಬಾರಿ ಅವಕಾಶ ನೀಡಲ್ಲ, ಮತದಾನಕ್ಕೆ ಸಾಕಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ, ನಾವುಗಳು ದೂರ ಊರಿಂದ ಬಂದಿದ್ಸೇವೆ ನಮಗೆ ಎಲ್ಲಿ ಮತದಾನದ ಅವಕಾಶ ಕಲ್ಪಿಸಿದ್ದೀರಿ ತಿಳಿಸಿ ಎಂದು ಸಹಾಯಕ ಚುನಾವಣಾಧಿಕಾರಿಗಳ ಬಳಿ ೩೦ ಕ್ಕೂ ಹೆಚ್ಚು ಮೈಕ್ರೋ ಅಬ್ಸರ್ವರ್ ತಮ್ಮ ಅಳಲನ್ನು ತೋಡಿ ಕೊಂಡರು.
ಮಂಡ್ಯ ಲೋಕಸಭಾ ಚುನಾವಣೆಯ ಜಿಲ್ಲಾ ನೋಡಲ್ ಅಧಿಕಾರಿ ಸಂಜೀವಪ್ಪ ಹಾಗೂ ಉಮೇಶ್, ಕೆಆರ್.ನಗರ ತಹಸೀಲ್ದಾರ್ ಪೂರ್ಣಿಮಾ, ಸಾಲಿಗ್ರಾಮ ತಹಸೀಲ್ದಾರ್ ನರಗುಂದ, ಗ್ರೇಡ್-೨ ತಹಸೀಲ್ದಾರ್ ಬಾಲಸುಬ್ರಹ್ಮಣ್ಯಂ, ಶಿರೇಸ್ತೆದಾರ್ ಅಕ್ರಂಭಾಷ, ಉಪ ತಹಸೀಲ್ದಾರ್ ಗಳಾದ ಕೆ.ಜೆ.ಶರತ್ ಕುಮಾರ್,ಮಂಜುನಾಥ್, ಕೃಷ್ಣಮೂರ್ತಿ, ಮಹೇಶ್ ಹಾಗೂ ಸಿಬ್ಬಂದಿಗಳು ಇದ್ದರು