ಮಂಡ್ಯ: ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2076 ಮತಗಟ್ಟೆಗಳಿದ್ದು, 2076 ಪೈಕಿ 693 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಸೂಕ್ಷ್ಮ ಮತಗಟ್ಟೆಗಳ ಬಳಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಮತಗಟ್ಟೆಗಳ ಸುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಒಟ್ಟು 17,79,243 ಮತದಾರರಿದ್ದು, ಪುರುಷ ಮತದಾರರು-8,76,112, ಮಹಿಳಾ ಮತದಾರರು-9,02,963, ಇತರೆ ಮತದಾರರು-168 ಮಂದಿ ಇದ್ದಾರೆ.

ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ.
ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ ಹೇರಲಾಗಿದ್ದು, ಒಬ್ಬ PRO ಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ. ಜಿಲ್ಲಾಧ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ಆರಂಭದಲ್ಲೇ ತಾಂತ್ರಿಕ ದೋಷ
ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯ ಮತಗಟ್ಟೆ ಸಂಖ್ಯೆ 100ರಲ್ಲಿ ಆರಂಭದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, 7.15 ಆದರೂ ಮತದಾನ ಪ್ರಾರಂಭವಾಗಿರಲಿಲ್ಲ. ಕೈಕೊಟ್ಟಿದ್ದ ಮತಯಂತ್ರ ದುರಸ್ತಿ ಬಳಿಕ 7.35ಕ್ಕೆ ಮತದಾನ ಆರಂಭವಾಯಿತು.
ಮತದಾನಕ್ಕಾಗಿ ಮತಗಟ್ಟೆ ಕೇಂದ್ರದ ಮುಂದೆ ಮತದಾರರು ಜಮಾಯಿಸಿದ್ದರು.