ಹೊಸದಿಲ್ಲಿ : ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಇದು ಸಾಮಾನ್ಯ ಚುನಾವಣೆಯಲ್ಲ, ಯಾವುದೇ ದಿಕ್ಕು ತಪ್ಪಿಸುವ ತಂತ್ರಗಳಿಗೆ ಮಣಿಯಬಾರದು. ಮತದಾನದ ಗುಂಡಿಗೆ ಒತ್ತುವ ಮೊದಲು ಸಂವಿಧಾನವು ಹೃದಯದಲ್ಲಿ ಪ್ರತಿಧ್ವನಿಸಬೇಕು. ಪ್ರಜಾತಂತ್ರದ ಈ ಆಂದೋಲನದಲ್ಲಿ ನಿಜವಾದ ಬದಲಾವಣೆ ಮಾಡುವವರಾದ ಮೊದಲ ಬಾರಿಗೆ ಮತದಾನ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಖರ್ಗೆ ಮನವಿ ಮಾಡಿದ್ದಾರೆ.
ನಾವು, ಭಾರತದ ಜನರು ಇದು ಭಾರತದ ಸಂವಿಧಾನದ ಆತ್ಮ, ನೀವು ಮತದಾನಕ್ಕೆ ವೋಟಿಂಗ್ ಮಿಷಿನ್‌ನಲ್ಲಿ ಗುಂಡಿಯನ್ನು ಒತ್ತುವ ಮೊದಲು ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಅದು ಪ್ರತಿಧ್ವನಿಸಬೇಕು. ಇದು ಸಾಮಾನ್ಯ ಚುನಾವಣೆಯಲ್ಲ ಎಂಬುದನ್ನು ಮರೆಯಬೇಡಿ. ಇದು ಸರ್ವಾಧಿಕಾರದ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಚುನಾವಣೆ ಎಂದು ಖರ್ಗೆ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.