ಮೈಸೂರು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಆಪ್ ಸಿದ್ಧಪಡಿಸಿದ್ದು, ಅರ್ಜಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಶನಿವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಲಾಗಿದೆ. ಜೂ.೨೭ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ನಂತರ ಅರ್ಜಿ ಸಲ್ಲಿಕೆಗೆ ಆಪ್ ಬಿಡುಗಡೆ ಮಾಡುತ್ತೇವೆ. ಆ.೧೭ರ ನಂತರ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ, ನಿರಂತರವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ ಎಂದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಈ ಆಪ್ ರೂಪಿಸಲಾಗಿದೆ. ಸಾರ್ವಜನಿಕರು ಒಂದು ರೂಪಾಯಿ ಹಣವನ್ನು ಅರ್ಜಿ ಸಲ್ಲಿಕೆಗೆ ಕೊಡಬಾರದು. ಅರ್ಜಿ ಸಲ್ಲಿಸಿ ಸ್ಚೀಕೃತಿ ಪತ್ರ ಸಿಕ್ಕರೆ ಅಲ್ಲಿಗೆ ನೀವು ಫಲಾನುಭವಿಗಳ ಪಟ್ಟಿಗೆ ಸೇರುತ್ತೀರಾ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮಾಹಿತಿ ನೀಡಿದರು.
ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಹಣಕಾಸಿನ ತೊಂದರೆ ಇದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲಾ ರೀತಿಯ ಸಂಪನ್ಮೂಲ ನಮ್ಮ ಬಳಿ ಇದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾದ ಬಳಿಕ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ ಎಂದರು.
ಹರಕೆ ತೀರಿಸಿದ ಹೆಬ್ಬಾಳ್ಕರ್: ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾದ ಬಳಿಕ ಮೊದಲ ಬಾರಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಹೆಬ್ಬಾಳ್ಕರ್ ಅವರನ್ನು ದೇಗುಲದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು. ನಂತರ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅರ್ಚಕರು ಪ್ರಸಾದ ನೀಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಚಾಮುಂಡಿ ತಾಯಿಯಲ್ಲಿ ಹರಕೆ ಕಟ್ಟಿದ್ದೆ. ಈಗ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಚಾಮುಂಡಿಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದೇನೆ. ರಾಜ್ಯದಲ್ಲಿ ಒಳ್ಳೆಯ ಮಳೆಯಾಗಲಿ ಎಂದು ದೇವಿಯನ್ನು ಸೆರೆಗೊಡ್ಡಿ ಬೇಡಿಕೊಂಡಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.