ಕೆ.ಆರ್.ನಗರ: ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ನೀಡಿದ್ದು ಕಂಡು ಬಂದಲ್ಲಿ ನನ್ನ ಎರಡನೇ ಮುಖ ತೋರಿಸಬೇಕಾಗುತ್ತದೆ ಇದನ್ನು ಅರಿತು ಕಾಂಗ್ರೆಸ್ ಪಕ್ಷದವರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ರೇಡಿಯೋ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ನನ್ನ ನೇತೃತ್ವದಲ್ಲಿ ನಡೆಯಲಿದ್ದು ಇದಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಹಕಾರ ನೀಡಬೇಕು ಎಂದು ಕೋರಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಮತದಾರರು ವಿಶಾಲ ಹೃದಯ ಉಳ್ಳವರಾಗಿದ್ದು ಶೇ.೩೦ರಷ್ಟು ಒಕ್ಕಲಿಗ ಸಮಾಜದವರು ಸಹೃದಯಿಗಳಾಗಿದ್ದಾರೆ ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲು ಸಾಧ್ಯವಾಯಿತು ಎಂದ ಮಾಜಿ ಸಚಿವರು ಇಂತಹಾ ಮತದಾರರನ್ನು ರಾಜ್ಯದ ಯಾವ ಕ್ಷೇತ್ರದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಅನುಕಂಪದಿಂದ ಗೆಲುವು ಸಾಧಿಸಿದ್ದು, ಗುಲಾಬಿ ಗಿಡಕ್ಕೆ ಹೂವಿನ ಆಸೆಗಾಗಿ ನೀರೆರೆದಾಗ ಅದರಲ್ಲಿ ಮುಳ್ಳು ಇದೆ ಎನ್ನುವುದು ನನಗೆ ಈ ಚುನಾವಣೆಯಲ್ಲಿ ಅರ್ಥವಾಯಿತು ಎಂದು ಹೇಳಿದರು.
ಕಳೆದ ೧೯ ವರ್ಷಗಳಿಂದ ಕೆ.ಆರ್.ನಗರ ಮತ ಕ್ಷೇತ್ರದಲ್ಲಿ ರಾಜಕಾರಣ ಮಾಡದೆ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ ೨೦೦೪ರಲ್ಲಿ ಘೋಷಿಸಿಕೊಂಡಿದ್ದ ಆಸ್ತಿಯಲ್ಲಿ ೨೦೨೩ ಕ್ಕೆ ೫೦ ಕೋಟಿ ರೂಗಳಷ್ಟು ಸಾಲ ಮಾಡಿದ್ದೇನೆ ಎಂದು ಮಾಹಿತಿ ನೀಡಿದ ಸಾ.ರಾ.ಮಹೇಶ್ ಇಷ್ಟು ವರ್ಷಗಳಲ್ಲಿ ನೋವು ಮತ್ತು ಪ್ರೀತಿ ಕಂಡಿದ್ದೇನೆ ಎಂದು ತಿಳಿಸಿದರು.
ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರಲ್ಲದೆ ನನ್ನ ಬದುಕಿನ ಕೊನೆಯವರೆಗೂ ಹೆಚ್.ಡಿ.ಕುಮಾರಸ್ವಾಮಿರವರ ಜೊತೆಯಲ್ಲಿ ರಾಜಕಾರಣ ಮಾಡುತ್ತೇನೆ ಎಂದು ತಿಳಿಸಿದ ಸಾ.ರಾ.ಮಹೇಶ್ ಒಕ್ಕಲಿಗ ಸಮಾಜದವರಿಂದ ಹೆಚ್.ಡಿ.ದೇವೇಗೌಡರಿಗೆ, ಹೆಚ್‌ಡಿಕೆ ಅವರಿಗೆ ಆದ ಅನ್ಯಾಯ ಈ ಬಾರಿ ಕ್ಷೇತ್ರದಲ್ಲಿ ನನಗೂ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
೧೫ ವರ್ಷಗಳ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ, ವೈಯುಕ್ತಿಕ ಜೀವನಕ್ಕಾಗಿ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಒಂದು ರೂ ಹಣ ಪಡೆದಿಲ್ಲ ಕ್ಷೇತ್ರದ ಅಭಿವೃದ್ದಿಗಾಗಿ ಮತ್ತು ಜನತೆಯ ಕಷ್ಟ ಸುಖಗಳಲ್ಲಿ ಹಗಲಿರುಳು ಪಾಲ್ಗೊಂಡಿದ್ದೇನೆ ಇದನ್ನು ಜನತೆ ಅರಿಯದೆ ನನ್ನ ಸೋಲಿಗೆ ಕಾರಣರಾಗಿದ್ದಾರೆ ಆದರೂ ನಾನು ದೃತಿಗೆಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾದ ಹೆಚ್.ಸಿ.ಕುಮಾರ್, ಮೆಡಿಕಲ್‌ರಾಜಣ್ಣ, ಜಿ.ಪಂ. ಮಾಜಿ ಸದಸ್ಯರಾದ ಎಂ.ಟಿ.ಕುಮಾರ್, ಸಿ.ಜೆ.ದ್ವಾರಕೀಶ್, ಎ.ಎಸ್.ಚನ್ನಬಸಪ್ಪ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್.ಪ್ರಕಾಶ್, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಉಮೇಶ್, ತೋಂಟದಾರ್ಯ, ಜಗದೀಶ್, ಮುಖಂಡರಾದ ಅಮ್ಮಸಂತೋಷ್, ಮಂಜುನಾಥ್, ದೊಡ್ಡಕೊಪ್ಪಲುನಾಗಣ್ಣ, ಸತ್ತಿಗೌಡ, ಚಿಕ್ಕವೀರು ಮತ್ತಿತರರು ಹಾಜರಿದ್ದರು.