Tuesday, April 22, 2025
Google search engine

Homeರಾಜಕೀಯಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನವಿ

ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನವಿ

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ದೆಹಲಿಯಲ್ಲಿ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಮನವಿ ಮಾಡಿದರು.

ಕರದಾಳ ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು’ ಭವಿಷ್ಯದ ನಾಯಕ ‘ ಎಂದು ಸಂಭೋದಿಸಿ ಪರಮೇಶ್ವರ ಮಾತು ಪ್ರಾರಂಭಿಸಿದ್ದುವಿಶೇಷವೆನಿಸಿತು.

ಧರ್ಮದ ಆಧಾರದ ಮೇಲೆ ಬಿಜೆಪಿ ರಾಜಕೀಯ

ಬಿಜೆಪಿ ಪಕ್ಷ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಿಕೊಂಡು ಮತ ಕೇಳುತ್ತಿದೆ ಎಂದು ಆರೋಪಿಸಿದ ಗೃಹ ಸಚಿವರು, ಹಿಂದೂ ಧರ್ಮದ ಹೆಸರಿನಲ್ಲಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಿದ್ದಾರೆ. ನಾವು ಯಾರು ಹಿಂದೂಗಳು ಅಲ್ಲವೇ? ನಾವು ರಾಮನ ಭಕ್ತರಲ್ಲವೇ? ದೇವಾಲಯಕ್ಕೆ ಹೋಗುವುದಿಲ್ಲವೇ? ಧರ್ಮದ ಆಧಾರದ ಮೇಲೆ ಚುನಾವಣೆಗೆ ಬಂದವರಿಗೆ ಮತ ಹಾಕಬೇಡಿ ಎಂದು ಪರಮೇಶ್ವರ ಹೇಳಿದರು.

ನಿರುದ್ಯೋಗ ಎಂದರೆ ಪಕೋಡ ಮಾರಿ ಎನ್ನುವ ಪ್ರಧಾನಮಂತ್ರಿ ಮೋದಿ

ಯುವಕರಿಗೆ ಉದ್ಯೋಗ ಕೊಡಲು ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಪಕೋಡ ಮಾರಲು ಹೇಳಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು 18,171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಚಿವರಾದ ಕೃಷ್ಣ ಭೈರಗೌಡ ಹಾಗೂ ಪ್ರಿಯಾಂಕ್ ಖರ್ಗೆ ಕೊನೆಗೆ ಸಿಎಂ ಹೋಗಿ ಬಂದರು ಆಗಲೂ ಪ್ರಯೋಜನವಾಗಲಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯಿತು. ಬರ ಪರಿಹಾರ ಬಿಡುಗಡೆ ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಕೇಸು ಹಾಕಿದ್ದು ಬಹುಶಃ ಇದೇ ಮೊದಲು. ಯಾವಾಗ ಕೋರ್ಟ್ ಛೀಮಾರಿ ಹಾಕಿತೋ ಆಗ 3474 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಮನದಾಳದ ಮಾತು ಕೇಳಿ ಕಣ್ಣಲ್ಲಿ ನೀರು ಬಂತು

ಮಲ್ಲಿಕಾರ್ಜುನ ಖರ್ಗೆ ಅವರ ಮನಸಿನಾಳದ ಮಾತುಗಳನ್ನು ನೀವೆಲ್ಲ ಕೇಳಿದ್ದೀರಿ. ಅವರು ಮಾತು ಕೇಳಿದಾಗ ನಮಗೆ ಕಣ್ಣಲ್ಲಿ ನೀರು ಬಂತು.ಕಳೆದ ಸಲ ಅವರನ್ನ ಸೋಲಿಸಿದ್ದೀರಿ. ಈ ಸಲ ಅವರಿಗೆ ಆಶೀರ್ವಾದ ಮಾಡಿ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಗೆಲ್ಲುವುದು ಕೂಡಾ ಅಷ್ಟೇ ಸತ್ಯ ಎಂದು ಪರಮೇಶ್ವರ ಹೇಳಿದರು.

ಚುನಾವಣೆ ನಂತರ ಐದು ಗ್ಯಾರಂಟಿಗಳನ್ನು ನಿಲ್ಲಿಸಿಬಿಡುತ್ತಾರೆ ಎಂದು ಬಿಜೆಪಿಯವರು ಸುಳ್ಳು ಹಬ್ಬಿಸುತ್ತಿದ್ದಾರೆ. ಅವರ ಮಾತುಗಳನ್ನು ನಂಬಬೇಡಿ. ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.

ಮಹಿಳೆಯರಿಗೆ ಆರ್ಥಿಕ ಸಮಾನತೆ ನೀಡದ ಬಿಜೆಪಿ ಅದಕ್ಕಾಗಿಯೇ ಗ್ಯಾರೆಂಟಿ ಯೋಜನೆಗಳು: ಪ್ರಿಯಾಂಕ್ ಖರ್ಗೆ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಜನರು ಆರ್ಥಿಕ ಸಮಾನತೆ ಸಾಧಿಸುವುದು, ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಬಿಜೆಪಿಯವರಿಗೆ ಬೇಕಿಲ್ಲ. ಹಾಗಾಗಿ, ಆರ್ಥಿಕ ಸಬಲೀಕರಣ ಸಾಧಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತ ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಟೀಕಿಸಿದರು.

ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲು ಅನುಭವಿಸಿದ್ದರಿಂದ ಅಭಿವೃದ್ದಿಯಲ್ಲಿ ಕುಂಠಿತ ಕಂಡಿದ್ದು ಈ ಭಾಗ ದಶಕಗಳ ಕಾಲ ಹಿಂದೆ ಬಿದ್ದಿದೆ. ಸಂಸದ ಉಮೇಶ ಜಾಧವ ಅಭಿವೃದ್ದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರ ವಿರುದ್ದ ಗೋ ಬ್ಯಾಕ್ ಅಭಿಯಾನ ಪ್ರಾರಂಭವಾಗಿದೆ. ಸಾರ್ವಜನಿಕರು ಕೇಳುವ ಅಭಿವೃದ್ದಿಯ ಲೆಕ್ಕ ಕೊಡಲು ಅವರು ವಿಫಲರಾಗಿದ್ದಾರೆ ಎಂದರು.

ಉಮೇಶ್ ಜಾಧವ್ ಸಾಧನೆ ಎಂದರೆ ಒಂದು ವಾರದ ವಂದೇ ಭಾರತ್ ಟ್ರೇನ್

” ಉಮೇಶ ಜಾಧವನ ಒಂದೇ ಒಂದು ಸಾಧನೆ ಎಂದರೆ ಅದು ವಂದೇ ಭಾರತ್ ಟ್ರೇನ್ ಓಡಿಸಿರುವುದು. ವಂದೇ ಭಾರತ್ ಟ್ರೇನ್ ಓಡಿದ್ದು ಒಂದೇ ವಾರ ಮಾತ್ರ. ಈಗ ಮತ್ತೆ ಪ್ರಾರಂಭ ಮಾಡಿದ್ದಾರಂತೆ. ಈ ಜಾಧವ ಮೊದಲು ನಮ್ಮಲ್ಲೆ ಇದ್ದವರು. ಓದಿದ್ದು, ಉದ್ಯೋಗ ಗಿಟ್ಟಿಸಿಕೊಂಡಿದ್ದು, ರಾಜಕೀಯ ನೆಲೆ ಕಂಡುಕೊಂಡಿದ್ದು, ಟಿಕೇಟ್ ಪಡೆದು ಗೆದ್ದಿದ್ದಿ ಕೂಡಾ ನಮ್ಮ ಕಾಂಗ್ರೆಸ್ ನಿಂದಲೇ. ಆದರೆ ಕಾಂಗ್ರೆಸ್ ಏನು ಮಾಡಿದ್ದು ಅಂತಾನೆ. ಇದು ಉಂಡ ತಟ್ಟೆಯಲ್ಲೇ ಹೊಲಸು ಮಾಡಿದಂತೆ” ಎಂದು ಖರ್ಗೆ ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆಗಳ ಲಾಭ ಜಾಸ್ತಿ ಹೋಗುತ್ತಿರುವುದೇ ಮಹಿಳೆಯರಿಗಾಗಿ ಯಾಕೆಂದರೆ ನಮಗೆ ಮಹಿಳೆಯರ ಮೇಲೆ ಜಾಸ್ತಿ ವಿಶ್ವಾಸವಿದೆ, ಭರವಸೆ ಇದೆ. ಪುರುಷರಿಗೆ ಹಣ ಕೊಟ್ಟರೆ ವ್ಯರ್ಥ ಖರ್ಚು ಮಾಡುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

ಆನೇಕಲ್ ಶಾಸಕ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಮಹೇಬೂಬ್ ಸಾಹೇಬ, ನಾಗರೆಡ್ಡಿ ಪಾಟೀಲ, ಶಿವಾನಂದ ಪಾಟೀಲ, ರಮೇಶ ಮರಗೋಳ, ಮುಕ್ತಾರ್ ಪಟೇಲ್ ಇದ್ದರು.

RELATED ARTICLES
- Advertisment -
Google search engine

Most Popular