ಬೆಂಗಳೂರು: ಬಿಸಿ ತಾಪಮಾನದಿಂದ ಕಂಗಾಲಾಗಿದ್ದ ಸಿಲಿಕಾನ್ ಸಿಟಿ ಜನರಿಗೆ ನಿನ್ನೆ ಮಳೆರಾಯನ ಸಿಂಚನವಾಗಿದೆ. ಆ ಮೂಲಕ ಸಿಟಿ ಜನರು ಮೊದಲ ಮಳೆಯನ್ನು ಸಂಭ್ರಮಿಸಿದ್ದಾರೆ. ನಗರದ ಹಲವೆಡೆ ನಿನ್ನೆ ಜೋರು ಮಳೆ ಆಗಿತ್ತು. ಇಂದು ಕೂಡ ನಗರದೆಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಇದೀಗ ಗುಡುಗು, ಮಿಂಚಿ ಸಹಿತ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್ ಸೇರಿದಂತೆ ಕೆ.ಆರ್‌ಪುರಂ ವೈಟ್ ಫಿಲ್ಡ್, ಬೆಂಗಳೂರು ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆ ಮಳೆ ಸುರಿಯುತ್ತಿದೆ.
ಬಿರು ಬಿಸಿಲಿಗೆ ಬೆಂದು ಹೋಗಿದ್ದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಇಂದೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದರಂತೆ ಇದೀಗ ನಗರದ ಹಲವು ಏರಿಯಾಗಳಲ್ಲಿ ಮಳೆ ಶುರುವಾಗಿದ್ದು, ಇನ್ನು ಕೆಲವೆಡೆ ಭಾರೀ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಿಡಿಲು ಜೋರಾಗಿದೆ. ಕಪ್ಪು ಮೋಡ ನೋಡುತ್ತಿದ್ದರೆ ಯಾವುದೇ ಸಂದರ್ಭದಲ್ಲೂ ಭಾರೀ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು.

ನಿನ್ನೆ ಹಾಗೂ ಇಂದು ನಗರದಲ್ಲಿ ಗರಿಷ್ಠ ೩೮ ಉಷ್ಣಾಂಶ ದಾಖಲಾಗಿದೆ. ಬೆಳಿಗ್ಗೆಯಿಂದ ಬಿಸಿ ಹಾಗೂ ಆರ್ದ್ರ ವಾತಾವರಣವಿತ್ತು. ಇದೀಗ ಬಿಸಿಲಿನ ಬೇಗೆಯಿಂದ ಬೇಸತ್ತ ಸಿಟಿ ಮಂದಿಗೆ ವರುಣ ತಂಪೆರೆದಿದ್ದಾನೆ. ಮಳೆ ಹಿನ್ನಲೆ ಹಾಟ್ ಸಿಟಿ ಕೂಲ್ ಕೂಲ್ ಆಗಿದೆ. ಇನ್ನು ಮಳೆ ಹಿನ್ನಲೆ ಉಷ್ಣಾಂಶದಲ್ಲಿ ಇಳಿಕೆ ಆಗಿದೆ.
ಮಳೆ ಹಿನ್ನಲೆ ಪ್ಯಾಲೇಸ್ ರಸ್ತೆ ಅಂಡರ್ ಪಾಸ್‌ಗಳಲ್ಲಿ ಜನರು ಆಸರೆ ಪಡೆದುಕೊಂಡಿದ್ದಾರೆ. ಅಂಡರ್ ಪಾಸ್ ಗಳಲ್ಲಿ ವಾಹನಗಳು ನಿಂತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ವಸಂತನಗರ ಸುತ್ತಮುತ್ತ ಕೂಡ ಜೋರು ಮಳೆ ಆಗುತ್ತಿದ್ದು, ನಿನ್ನೆಗಿಂತ ಇಂದು ಜೋರಾಗಿದೆ. ಜಯನಗರ, ಬಸವನಗುಡಿ, ಸೌತ್ ಎಂಡ್ ಸರ್ಕಲ್ ಬಳಿಯೂ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ.