ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್. ನಗರ : ಹಾಸನ ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಸಂಬಂಧ ಸಂತ್ರಸ್ತೆಯೊಬ್ಬರು ಅಪಹರಣವಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ಆರಕ್ಷಕ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ಗುರುವಾರ ರಾತ್ರಿ ೯-೦೦ ಗಂಟೆ ಸಮಯದಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಮೇರೆಗೆ ಸಂಸದರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ತಡರಾತ್ರಿ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಾಗಿದೆ. ಮೈಸೂರಿನ ಹೆಚ್ಚುವರಿ ಪೊಲೀಸ್ ಆಯುಕ್ತೆ ನಂದಿನಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಪೆನ್‌ಡ್ರೈವ್ ವಿವಾದದಲ್ಲಿ ತನ್ನ ತಾಯಿಯ ಪಾತ್ರವೂ ಇದೆ. ವೀಡಿಯೋ ಬಹಿರಂಗವಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಲೈಂಗಿಕ ದೌರ್ಜನ್ಯ ಎದುರಿಸುತ್ತಿರುವ ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಮೊದಲ ಆರೋಪಿ(ಎ೧)ಯಾಗಿದ್ದು, ಕೆ.ಆರ್.ನಗರ ತಾಲೂಕಿನ ಹೆಬ್ಬಾಳುಕೊಪ್ಪಲು ನರಸಿಂಹೇಗೌಡರ ಪುತ್ರ ಗ್ರಾಮದ ಸತೀಶ್‌ಬಾಬು ಎರಡನೆಯ ಆರೋಪಿಯಾಗಿದ್ದಾರೆ.
ದೂರಿನಲ್ಲೇನಿದೆ-ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು ಅವರ ಪುತ್ರ ಹೆಚ್.ಡಿ.ರಾಜು ದೂರು ನೀಡಿದ್ದು, ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಾಗಿದೆ. ನನ್ನ ತಾಯಿ ಆರು ವರ್ಷಗಳಿಂದ ಹೊಳೇನರಸೀಪುರದ ಚೆನ್ನಾಂಬಿಕಾ ಥಿಯೇಟರಿನ ಬಳಿಯಿರುವ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೇದ ಮೂರು ವರ್ಷಗಳಿಂದ ಅಲ್ಲಿ ಕೆಲಸ ಬಿಟ್ಟಿದ್ದು, ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆಯ ಸಮಯದಲ್ಲಿ ಭವಾನಿರೇವಣ್ಣ ಅವರು ಮತ್ತೆ ಕೆಲಸಕ್ಕೆ ಕರೆದಿದ್ದಾರೆಂದು ಹೇಳಿ ತಾಲೂಕಿನ ಹೆಬ್ಬಾಳುಕೊಪ್ಪಲಿನ ಸತೀಶ್‌ಬಾಬಣ್ಣ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದರು ರಂದು ತಿಳಿಸಿದ್ದಾರೆ.
ಚುನಾವಣೆಯ ದಿನ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು. ನಂತರ ಏ.೨೯ರಂದು ರಾತ್ರಿ ಮನೆಗೆ ಬಂದು ಬಾಬಣ್ಣ ನಿಮ್ಮ ತಾಯಿ ಪೊಲೀಸರಿಗೆ ಸಿಕ್ಕರೆ ಪ್ರಕರಣ ದಾಖಲಾಗುತ್ತದೆ. ಅವರನ್ನು ಸಾಹೇಬರು ಕರೆದುಕೊಂಡು ಹೋಗಲು ತಿಳಿಸಿದ್ದಾರೆಂದು ಹೇಳಿ ಒತ್ತಾಯದಿಂದ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಏ.೧ರಂದು ನನ್ನ ಸ್ನೇಹಿತರು ಕೆಲವರು ಮನೆಗೆ ಬಂದು ನಿನ್ನ ತಾಯಿಯ ವೀಡಿಯೋ ಮೋಬೈಲ್ ಫೋನಿನಲ್ಲಿ ಹರಿದಾಡುತ್ತಿದೆ. ನಿನ್ನ ತಾಯಿ ಕೈಮುಗಿದರೂ ಪ್ರಜ್ವಲ್ ಅಣ್ಣ ಬಲಾತ್ಕಾರ ಮಾಡಿರುವ ದೃಶ್ಯ ವೀಡಿಯೋದಲ್ಲಿದೆ. ಆ ಬಗ್ಗೆ ದೊಡ್ಡ ಪ್ರಕರಣವೂ ದಾಖಲಾಗಿದೆ ಎಂದರು. ಆಗ ಬಾಬಣ್ಣ ಅವರಿಗೆ ಕರೆಮಾಡಿ ತಾಯಿಯನ್ನು ಕರೆದುಕೊಂಡು ಬನ್ನಿ ಎಂದು ತಿಳಿಸಿದೆ.

ಈ ಹಿಂದೆ ರೇವಣ್ಣ ಸಾಹೇಬರ ಮಗ ಬೇರೆಯವರೊಂದಿಗೆ ಗಲಾಟೆ ಮಾಡಿದಾಗ ನಿಮ್ಮ ತಾಯಿಯೂ ದೊಣ್ಣೆ ಹಿಡಿದು ನಿಂತಿರುವ ಫೋಟೋ ಬಂದಿದೆ. ಹೀಗಾಗಿ ಅವರ ಮೇಲೂ ಎಫ್‌ಐಆರ್ ದಾಖಲಾಗಿದೆ. ಇನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಬೇಕು ಎಂದರು.
ನಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಸುಳ್ಳು ಹೇಳಿ ತಾಯಿಯನ್ನು ಒತ್ತಾಯದಿಂದ ಕರೆದೊಯ್ದು ನಮಗೆ ಗೊತ್ತಿಲ್ಲದ ಕಡೆ ಕೂಡಿ ಹಾಕಿದ್ದಾರೆ. ನನ್ನ ತಾಯಿಯ ಜೀವಕ್ಕೆ ತೊಂದರೆಯಿದೆ. ತಾಯಿಯನ್ನು ಕರೆದೊಯ್ಯಲು ಹೇಳಿದ ರೇವಣ್ಣ ಹಾಗೂ ಕರೆದೊಯ್ದ ಸತೀಶ್‌ಬಾಬಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ಪ್ರಕರಣದ ಎರಡನೆಯ ಆರೋಪಿ ಸತೀಶ್‌ಬಾಬಣ್ಣ ಅವರನ್ನು ಇಂದು ಮಧ್ಯಾಹ್ನ ಬಂಧಿಸಿದ್ದು, ಮೈಸೂರಿನ ಹೆಚ್ಚುವರಿ ಪೊಲೀಸ್ ಆಯುಕ್ತೆ ನಂದಿನಿ ವಿಚಾರಣೆ ನಡೆಸಿ ಮಧ್ಯಾಹ್ನದ ವೇಳೆಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಆನಂತರ ಆರೋಪಿಯನ್ನು ಪಟ್ಟಣದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.