ಜಕಾರ್ತ: ಇಂಡೊನೇಶ್ಯಾದ ಸುಲಾವೆಸಿ ದ್ವೀಪದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು ಕನಿಷ್ಟ ೧೪ ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಸುಲಾವೆಸಿ ಪ್ರಾಂತದ ಲುವು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. ಪ್ರವಾಹದಿಂದಾಗಿ ತಗ್ಗುಪ್ರದೇಶಗಳಲ್ಲಿ ಸುಮಾರು ೧೦ ಅಡಿಗಳಷ್ಟು ನೆರೆನೀರು ಹರಿಯುತ್ತಿದ್ದು ೧೩ ಉಪಜಿಲ್ಲೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಪ್ರಮುಖ ರಸ್ತೆಗಳಲ್ಲಿ ಕಲ್ಲು, ಮಣ್ಣು ರಾಶಿಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ೧೦೦೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಇದರಲ್ಲಿ ೪೨ ಮನೆಗಳು ಪ್ರವಾಹದಲ್ಲಿ ಕೊಚ್ಚೊಹೋಗಿವೆ ಎಂದು ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಜಲಾವೃತಗೊಂಡಿರುವ ಮನೆಗಳ ನಿವಾಸಿಗಳನ್ನು ರಬ್ಬರ್ ದೋಣಿ ಬಳಸಿ ತೆರವುಗೊಳಿಸಲಾಗುತ್ತಿದೆ. ಹಲವರನ್ನು ಮಸೀದಿಗಳು ಅಥವಾ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದ್ದಾರೆ.