Monday, April 21, 2025
Google search engine

Homeಅಪರಾಧಕಾನೂನುಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರ ವಿಡಿಯೋ ಶೇರ್ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಎಸ್...

ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರ ವಿಡಿಯೋ ಶೇರ್ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಎಸ್ ಐಟಿ

ಬೆಂಗಳೂರು: ಅಶ್ಲೀಲ ವಿಡಿಯೋಗಳನ್ನು ವಾಟ್ಸ್‌ ಆ್ಯಪ್ ಅಥವಾ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಸನ ಪೆನ್ ಡ್ರೈವ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಎಚ್ಚರಿಕೆ ನೀಡಿದೆ.

ಹಾಸನದಲ್ಲಿ ನಡೆದಿದೆ ಎನ್ನಲಾದ ಕೆಲವು ಅಶ್ಲೀಲ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿವೆ. ವಾಟ್ಸ್‌ ಆ್ಯಪ್ ಮೂಲಕ ಒಬ್ಬರಿಂದ ಒಬ್ಬರಿಗೆ ಶೇರ್ ಆಗುತ್ತಿದೆ.‌ ಇದರಿಂದ ಸಂತ್ರಸ್ತೆಯರ ಘನತೆ ಹಾಗೂ ಗೌರವಕ್ಕೆ ಚ್ಯುತಿಯಾಗುತ್ತಿದೆ. ಹೀಗಾಗಿ ಉದ್ದೇಶಪೂರ್ವವಾಗಿ ವಾಟ್ಸ್‌ ಆ್ಯಪ್ ಸೇರಿ‌ ಇನ್ನಿತರ ಆ್ಯಪ್​​ಗಳ ಮುಖಾಂತರ ವಿಡಿಯೋ ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69 (ಎ) ಹಾಗೂ 228 (ಎ) 1, 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಕಾನೂನು ನೆರವು ನೀಡಲು ಈಗಾಗಲೇ ಎಸ್ಐಟಿ ಸಹಾಯವಾಣಿ ಆರಂಭಿಸಿದೆ. ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ಕರೆ ಮಾಡಿ ಮಾತನಾಡಬಹುದು. ಸಂತ್ರಸ್ತೆಯರ ಹೆಸರು, ವಿಳಾಸ ಸೇರಿದಂತೆ ಇನ್ನಿತರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡ ತಿಳಿಸಿದೆ‌‌‌.‌ ಈ ಬೆನ್ನಲ್ಲೇ ಕೆಲವು ಮಹಿಳೆಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಹಿಳೆಯರ ಹೆಸರು ಹಾಗೂ ವಿಳಾಸ ನಮೂದಿಸಿಕೊಂಡಿರುವ ಎಸ್ಐಟಿ ತದನಂತರ ಅವರನ್ನು ಸಂಪರ್ಕಿಸಿ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ. ಹೀಗೆ ಬರುವ ಕರೆಗಳು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರದ್ದೇ? ಎಂಬುದರ ಬಗ್ಗೆ ನೈಜ ಪರಿಶೀಲನೆ ನಡೆಯಲಿದೆ.

ಮಹಿಳೆಯ ಅಪಹರಣ ಆರೋಪದಡಿ ಬಂಧಿತರಾಗಿರುವ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್‌.ಡಿ.ರೇವಣ್ಣ ಅವರು ತಮ್ಮ ಪರ ವಕೀಲರ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ನಾಲ್ಕು ದಿನಗಳ ಕಾಲ‌ ರೇವಣ್ಣ ಅವರನ್ನು ಭಾನುವಾರ ಎಸ್ಐಟಿ ಕಸ್ಟಡಿ ಪಡೆದಿದೆ. ಈ ಹಂತದಲ್ಲಿ ಜಾಮೀನು ಅರ್ಜಿ ಪುರಸ್ಕರಿಸುವುದು ಅನುಮಾನವಾಗಿದೆ. ಜಾಮೀನು ಅರ್ಜಿಗೆ ಎಸ್ಐಟಿಯು ಆಕ್ಷೇಪಣೆ ಸಲ್ಲಿಸಲಿದೆ.  

RELATED ARTICLES
- Advertisment -
Google search engine

Most Popular