ಗುಂಡ್ಲುಪೇಟೆ: ತಾಲೂಕಿನ ಕಾಂಗ್ರೆಸ್ ಯುವ ಮುಖಂಡರು ಹಾಗು ಜಿ.ಪಿ.ಬಾಯ್ಸ್ ವತಿಯಿಂದ ತಾಲೂಕಿನ 60 ಸರ್ಕಾರಿ ಶಾಲೆಗಳ ಪರಿಸರವನ್ನು ಶುಚಿಗೊಳಿಸುವ ಕಾರ್ಯಕ್ಕೆ ಭಾನುವಾರ ದೊಡ್ಡತುಪ್ಪೂರಿನ ಶಾಲೆಯಲ್ಲಿ ಶ್ರಮದಾನದ ಮಾಡುವ ಮೂಲಕ ಚಾಲನೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡರು ದೊಡ್ಡತುಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ಮುಂಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿ ತೆರವು ಮಾಡಿದರು. ಸುತ್ತುಗೋಡೆಗೆ ಹೊಂದಿಕೊಂಡಿರುವ ಚರಂಡಿ ಹೂಳೆತ್ತಿ ಸ್ವಚ್ಚ ಮಾಡಿದರು. ಕೊಠಡಿಗಳ ಮೇಲ್ಛಾವಣೆಯಲ್ಲಿ ಕಸಕಡ್ಡಿ ತೆರವು ಮಾಡಿದರು. ಇದರಿಂದ ಪರಿಸರ ಸ್ವಚ್ಚ ಹಾಗೂ ಸುಂದರವಾಯಿತು.
ಕಾಂಗ್ರೆಸ್ ಯುವ ಮುಖಂಡ ಮಡಹಳ್ಳಿ ಮಣಿ ಮಾತನಾಡಿ, ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ನನ್ನನ್ನು ಭೇಟಿಯಾಗಲು ಬರುವ ಮಂದಿ ಹೂಗುಚ್ಚ, ಹಾರ-ತುರಾಯಿ ಇತರೆ ಯಾವುದೇ ಉಡುಗೊರೆ ತರಬೇಡಿ ಎಂದಿದ್ದಾರೆ. ಅಲ್ಲದೇ ಫ್ಲೆಕ್ಸ್, ಬ್ಯಾನರ್ ಕೂಡ ಬೇಡ ಎಂದು ಹೇಳಿದ್ದು, ಇದಕ್ಕಾಗಿ ಮಾಡುವ ಖರ್ಚಿನ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಇತರೆ ಕಲಿಕೋಪಕರಣ ನೀಡುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ನಾವು ಉದ್ದೇಶಿತ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣ ಮತ್ತು ಶ್ರಮವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದೇವೆ. ತಿಂಗಳಿಗೆ ಒಂದು ಶಾಲೆಯಂತೆ 5 ವರ್ಷದಲ್ಲಿ ತಾಲೂಕಿನ 60 ಶಾಲೆಗಳಲ್ಲಿ ನಾವು ಶ್ರಮದಾನ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಯುವ ಮುಖಂಡರಾದ ಅಂಕಹಳ್ಳಿ ಮಹೇಂದ್ರ, ಮಹೇಶ, ಲೋಕೇಶ್, ಮಹೇಶ್, ಪ್ರಕಾಶ್, ಹರೀಶ್, ಮಂಜು, ರಾಜಶೇಖರ್ ಮೂರ್ತಿ, ಅಭಿ ಸೇರಿದಂತೆ ಬಿ.ಪಿ.ಬಾಯ್ಸ್ ಹಾಗೂ ಗ್ರಾಮಸ್ಥರು ಹಾಜರಿದ್ದರು.